ಗೋಣಿಕೊಪ್ಪಲು, ಡಿ.೪: ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದಿದ್ದ ಕಾಫಿ ಫಸಲು ಸೇರಿದಂತೆ ಇನ್ನಿತರ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರು ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾಲೂಕು ತಹಶೀಲ್ದಾರ್ ಯೋಗಾನಂದ್ ಅವರು ತಮ್ಮ ಕಚೇರಿಯ ಆವರಣದ ಸಭಾಂಗಣದಲ್ಲಿ ರೈತ ಮುಖಂಡರ ಹಾಗೂ ಸದಸ್ಯರ ಸಭೆ ನಡೆಸಿ ಸಮಾಲೋಚನೆ ನಡೆಸಿದರು.

ಕಳೆದ ಕೆಲವು ದಿನಗಳ ಹಿಂದೆ ಸರ್ಕಾರದ ಅಧಿಕಾರಿಗಳು ಶೇ.೩೦ ಭಾಗದ ರೈತರ ತೋಟಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದು ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಮನುಸೋಮಯ್ಯ ಆರೋಪಿಸಿದರು.

ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಮಳೆಯಿಂದ ಕೃಷಿ ಫಸಲು ಹಾನಿಯಾಗಿದೆ. ಆದರೆ ಅಧಿಕಾರಿಗಳು ಕೆಲವು ಗ್ರಾಮಗಳಿಗೆ ಸೀಮಿತ ಗೊಳಿಸಿ ಪರಿಹಾರ ಅರ್ಜಿ ಸ್ವೀಕರಿಸುವುದಾಗಿ ಹೇಳಿರುವುದು ಸರಿಯಲ್ಲ.ಹೀಗಾಗಿ ಪ್ರತಿ ಗ್ರಾಮದ ರೈತರ ಅರ್ಜಿ ಸ್ವೀಕರಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ, ಹುದಿಕೇರಿ, ಬಾಳೆಲೆ ಹಾಗೂ ಪೊನ್ನಂಪೇಟೆ ಹೋಬಳಿ ಯಿಂದ ಆಗಮಿಸಿದ ನೂರಾರು ರೈತರು ಈ ವೇಳೆ ತಮ್ಮ ಅಭಿಪ್ರಾಯವನ್ನು ತಹಶೀಲ್ದಾರ್ ಮುಂದೆ ಹೇಳಿದರು.

ರೈತರು ನೀಡುವ ಅರ್ಜಿಗೆ ಸ್ವೀಕೃತಿ ಪತ್ರ ನೀಡುತ್ತಿಲ್ಲ, ಕೆಲವಾರು ವರ್ಷಗಳ ಹಿಂದೆ ನೀಡಿದ ಪರಿಹಾರ ಅರ್ಜಿಗೆ ಪರಿಹಾರ ಲಭಿಸಿಲ್ಲ, ವನ್ಯಪ್ರಾಣಿಗಳ ಹಾವಳಿ, ಆರ್.ಟಿ.ಸಿ. ಗೊಂದಲ, ಬೆಳೆ ಕಾಲಂ ನಲ್ಲಿ ವ್ಯತ್ಯಾಸ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ರೈತರ ಅಹವಾಲು ಸ್ವೀಕರಿಸಿದ ತಹಶೀಲ್ದಾರ್ ಯೋಗಾನಂದ್ ರೈತರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ಪ್ರತಿ ರೈತರು ಪರಿಹಾರ ಅರ್ಜಿ ನೀಡಲು ಅವಕಾಶ ನೀಡಲಾಗಿದೆ. ತಾ.೭ ಅಂತಿಮ ದಿನವಾಗಿದೆ. ಸರ್ಕಾರದ ನಿಯಮದಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಆದಷ್ಟು ಬೇಗನೇ ರೈತರು ಅರ್ಜಿ ನೀಡಬೇಕು, ರಜಾ ದಿನ ಭಾನುವಾರ ಆದರೂ ಕಚೇರಿಯಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರತಿ ಅರ್ಜಿಗೆ ಸ್ವೀಕೃತಿ ಪತ್ರ ನೀಡಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗುತ್ತದೆ, ಶೇ.೯೦ ಕಾಫಿ ಬೆಳೆಗೆ ಪರಿಹಾರ ನೀಡಲಾಗುತ್ತದೆ ಶೇ.೧೦ ಭಾಗ ಉಳಿದ ಇತರೆ ಬೆಳೆಗೆ ಪರಿಹಾರ ನೀಡಲಾಗುತ್ತದೆ ಎಂದರು.

ರೈತ ಸಂಘ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಆಲೆಮಾಡ ಮಂಜುನಾಥ್, ಚಂಗುಲAಡ ಸೂರಜ್, ಅಪ್ಪಚ್ಚಂಗಡ ಮೋಟಯ್ಯ, ಮೂಕಳೇರ ಕುಶಾಲಪ್ಪ, ಸೇರಿದಂತೆ ಇನ್ನಿತರ ಪ್ರಮುಖರು ಸಮಸ್ಯೆ ಬಗ್ಗೆ ವಿವರಿಸಿದರು.

ಕೃಷಿ ಇಲಾಖೆಯ ಅಧಿಕಾರಿ ರೀನಾ, ತೋಟಗಾರಿಕೆ ಇಲಾಖೆಯ ಅಧಿಕಾರಿ ದೀನಾ ರೆವಿನ್ಯೂ ಅಧಿಕಾರಿಗಳಾದ ರಾಧಾಕೃಷ್ಣ, ಸೇರಿದಂತೆ ರೈತ ಮುಖಂಡರಾದ ತೀತರಮಾಡ ರಾಜ, ಮೇಚಂಡ ಕಿಶ ಮಾಚಯ್ಯ, ಚೊಟ್ಟೆಕಾಳಪಂಡ ಮನು, ಪುಚ್ಚಿಮಾಡ ರಾಯ್ ಮಾದಪ್ಪ, ಬಾಚಮಾಡ ಭವಿ ಕುಮಾರ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಸಮೀಪದ ನಾಡು ಕಚೇರಿ ಬಳಿಯಿಂದ ರೈತರು ಮೆರವಣಿಗೆಯಲ್ಲಿ ಆಗಮಿಸಿ, ನಂತರ ತಹಶೀಲ್ದಾರ್ ಯೋಗಾನಂದ್ ರವರಿಗೆ ಪರಿಹಾರ ಅರ್ಜಿ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಹೆಚ್.ಕೆ.ಜಗದೀಶ್