ಕೂಡಿಗೆ, ಡಿ. ೩ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ವಸಾಹತು ಕಾಲೋನಿಯಲ್ಲಿ ಹೇರಳವಾಗಿ ಬೆಳೆದು ನಿಂತಿರುವ ಕಾಡು ಪೊದೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಕಾಡು ಪೊದೆಗಳನ್ನು ಕಡಿದು ತೆರವುಗೊಳಿಸುವಂತೆ ಕೋರಿದ್ದಾರೆ.

ಈ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬೆಂಡೆಬೆಟ್ಟ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬರುವ ಕಾಡಾನೆಗಳು ಹಾರಂಗಿ ಕಾಲೋನಿ ಪೊದೆಗಳ ಮರೆಯಲ್ಲಿ ನಿಂತಿದ್ದನ್ನು ಕಂಡು ಜನರು ಭಯಾಭೀತರಾಗಿದ್ದಾರೆ. ಈ ಕಾಡು ಪೊದೆಗಳಿಂದ ಕಾಲೋನಿಯಲ್ಲಿ ವಾಸಿಸುತ್ತಿರುವ ಜನರಿಗೆ, ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿಗೆ ತೆರಳುವ ಮಕ್ಕಳಿಗೂ ತೊಂದರೆಯಾಗುತ್ತಿದ್ದು, ಕಾಡುಪ್ರಾಣಿಗಳ ಹಾವಳಿಯಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ತಮಗೆ ಆರೋಗ್ಯ ಸಮಸ್ಯೆ ಇದ್ದರೂ ಸಹ ರಾತ್ರಿಯ ವೇಳೆ ಹೊರಬರಲು ಭಯಪಡುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಮಹೇಂದ್ರ ಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಸಮಸ್ಯೆಯನ್ನು ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭ ಇಲಾಖೆಯ ಇಂಜಿನಿಯರ್ ಮತ್ತು ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.