ವೀರಾಜಪೇಟೆ, ಡಿ. ೩: ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೊಕ್ಲು ಗ್ರಾಮದಲ್ಲಿ ನಿರಂತರವಾಗಿ ಕಾಡಾನೆಗಳ ಧಾಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಫಸಲು ಬಂದಿರುವ ಬೆಳೆಗಳು ನಷ್ಟವಾಗಿದೆ. ಅರಣ್ಯ ಇಲಾಖೆಯು ಸ್ಥಳ ಪರಿಶೀಲನೆಗೆ ಮುಂದಾಗದೇ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ನಲ್ವತೊಕ್ಲು ಬೆಳೆಗಾರರು ಆರೋಪಿಸಿದ್ದಾರೆ.

ನಲ್ವತೊಕ್ಲು ಗ್ರಾಮದ ಬೆಳೆಗಾರ ಎಂ. ಅಯ್ಯಪ್ಪ ಮಾತನಾಡಿ, ಈ ವ್ಯಾಪ್ತಿಯಲ್ಲಿ ಸುಮಾರು ೧೦ ದಿನಗಳಿಂದ ಕಾಡಾನೆಗಳು ನಿರಂತರವಾಗಿ ಧಾಳಿ ನಡೆಸಿದ್ದು, ಫಸಲು ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು ಇಲಾಖೆಗೆ ಮನವಿಪತ್ರ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರುವುದಿಲ್ಲ. ಅಲ್ಲದೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು. ನಷ್ಟ ಹೊಂದಿರುವ ಸ್ಥಳಗಳನ್ನು ಶೀಘ್ರವಾಗಿ ಪರಿಶೀಲನೆಗೆ ಒಳಪಡಿಸಬೇಕು ಮತ್ತು ಸರ್ಕಾರ ಹಾಗೂ ಅರಣ್ಯ ಇಲಾಖೆಯು ಸೂಕ್ತ ಪರಿಹಾರ ಒದಗಿಸುವಂತೆ ಇಲಾಖೆಯನ್ನು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ವಾಟೇರಿರ ಬೋಪಣ್ಣ (ರಾಜಪ್ಪ) ಅವರು ಮಾತನಾಡಿ, ಕಾಡಾನೆಗಳನ್ನು ನಿಯಂತ್ರಣಗೊಳಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಫಸಲಿಗೆ ಬಂದ ಬಾಳೆ ತೋಟವು ಇದೀಗ ಕಾಡಾನೆ ಧಾಳಿಯಿಂದ ಕೈಗೆ ಬಂದ ತುತ್ತು ಬಾಯಿ ಬಾರದ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಅಕಾಲಿಕ ಮಳೆ ಮತ್ತು ನಿರಂತರ ಕಾಡಾನೆಗಳ ಧಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆಯನ್ನು ನಂಬಿಕೊAಡು ನಮ್ಮ ಜೀವನ ದುಸ್ತರವಾಗಿದೆ. ಬ್ಯಾಂಕ್‌ಗಳಿAದ ಬೆಳೆ ಸಾಲವಾಗಿ ಪಡೆದು ತೀರಿಸಲಾಗದ ಸ್ಥಿತಿಯಾಗಿದೆ. ಇಲಾಖೆ ಮತ್ತು ಸರ್ಕಾರವು ಬೆಳೆಗಾರರ ಸಂಕಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಮತ್ತು ಬೆಳೆ ನಷ್ಟ ಹೊಂದಿರುವ ಬೆಳೆಗಾರ ಪರವಾಗಿ ಆಗ್ರಹಿಸುತಿದ್ದೇನೆ ಎಂದು ಹೇಳಿದರು. ಈ ಸಂದರ್ಭ ಗ್ರಾಮಸ್ಥರಾದ ಮಂಡೇಡ ಜೀವನ್, ಕೆ. ಪುಷ್ಪ ದೇವಯ್ಯ, ಆಕಾಶ್ ದೇವಯ್ಯ ಮತ್ತು ಅಶೋಕ್ ಅವರು ಹಾಜರಿದ್ದರು.