ಮಡಿಕೇರಿ, ಡಿ. ೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಅಮ್ಮತ್ತಿ ಅಂಬೇಡ್ಕರ್ ಭವನದಲ್ಲಿ ವಾಲಗ ಪಡಿಪು ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ವಾದ್ಯ ಕಲಾವಿದ ನರಸಯ್ಯ ಮಾತನಾಡಿ, ನಮ್ಮ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ನಮ್ಮಲ್ಲಿ ಕಲೆಯನ್ನು ಕಲಿಯಲು ಹಿಂಜರಿಕೆ ಇರಬಾರದು. ಇತ್ತೀಚಿನ ದಿನಗಳಲ್ಲಿ ಈ ಕಲೆಯನ್ನು ಅಭ್ಯಾಸ ಮಾಡಲು ಅಧಿಕ ಮಂದಿ ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಅಕಾಡೆಮಿಯು ಕಲೆ, ಸಾಹಿತ್ಯ, ಆಚಾರ ವಿಚಾರವನ್ನು ಬೆಳಸುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಈ ಶಿಬಿರಕ್ಕೆ ಮಾರ್ಚ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತಾದರೂ ಕೋವಿಡ್ ಹಿನ್ನೆಲೆ ಅನಿವಾರ್ಯವಾಗಿ ಸ್ಥಗಿತಗೊಳಿಸಲಾಯಿತು. ಪುನಃ ಕಳೆದ ಒಂದು ವಾರ ತರಬೇತಿ ನೀಡಲಾಗಿದ್ದು, ಶಾಲಾ ವಿದ್ಯಾರ್ಥಿಗಳು ಕೂಡ ತುಂಬಾ ಆಸಕ್ತಿ ತೋರಿ ಶ್ರೀಮಂತ ಕಲೆಯನ್ನು ಅಭ್ಯಾಸ ಮಾಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಅಕಾಡೆಮಿ ಸದಸ್ಯ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶಿಬಿರದಲ್ಲಿ ೨೭ ಶಿಬಿರಾರ್ಥಿಗಳು ಭಾಗವಹಿಸಿದ್ದು, ಕೊನೆಯಲ್ಲಿ ಶಿಬಿರಾರ್ಥಿಗಳಿಂದ ವಾಲಗ ಪ್ರದರ್ಶನ ಏರ್ಪಡಿಸಲಾಗಿತ್ತು. ತರಬೇತುದಾರರಾಗಿ ಶಿಕ್ಷಕ ಅರುಣ್ ಭಾಗವಹಿಸಿದ್ದರು. ಅಕಾಡೆಮಿ ಸದಸ್ಯ ಮಾಚಿಮಾಡ ಜಾನಕಿ ವಂದಿಸಿದರು. ಹಿರಿಯ ವಾದ್ಯ ಕಲಾವಿದರಾದ ಪೊಂದೆಕುಟ್ಟಡ ಜಪ್ಪು, ದಿನು, ಸವಿತಾ ಮತ್ತಿತರರು ಉಪಸ್ಥಿತರಿದ್ದರು.