ಕಣಿವೆ, ಡಿ. ೩: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ಮಳೆಗೆ ಮನೆಯೊಂದರ ಗೋಡೆ ಕುಸಿದಿದೆ. ಸ್ಥಳೀಯ ನಿವಾಸಿ ಕೆಂಪಮ್ಮ ಎಂಬವರ ಮನೆಗೋಡೆ ಕುಸಿದು ಬಿದ್ದಿದ್ದು, ಸ್ಥಳಕ್ಕಾಗಮಿಸಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ. ಷಂಶುದ್ದೀನ್, ಸಂಬAಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಕಳೆದ ಒಂದು ವಾರದ ಹಿಂದೆ ಸುರಿದ ಮಳೆಗೆ ಮನೆಯಗೋಡೆ ಬಿರುಕು ಬಿಟ್ಟಿದ್ದ ಹಿನ್ನೆಲೆ ಆ ಮನೆಯಲ್ಲಿ ವಾಸವಿರದಂತೆ ಕಂದಾಯ ಇಲಾಖೆಯಿಂದ ನೋಟೀಸ್ ನೀಡಲಾಗಿತ್ತು. ಅದರಂತೆ ಕೆಂಪಮ್ಮ ತಮ್ಮ ಮಗಳ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಗ್ರಾ.ಪಂ. ಸದಸ್ಯ ಕೆ.ಬಿ. ಷಂಶುದ್ದೀನ್ ಮಾತನಾಡಿ, ಬಸವೇಶ್ವರ ಬಡಾವಣೆಯಲ್ಲಿ ಸುಮಾರು ೧೦ಕ್ಕೂ ಹೆಚ್ಚು ಕುಟುಂಬಗಳು ಇಂತಹ ಸಮಸ್ಯೆಯನ್ನು ಅನುಭವಿಸುತ್ತಿವೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಜನರಿಗೆ ಸೂಕ್ತವಾದ ಪರಿಹಾರ ಒದಗಿಸಿಕೊಡಬೇಕಾಗಿದೆ. ಇದರ ಬಗ್ಗೆ ಸ್ಥಳೀಯ ಶಾಸಕರು ಕೂಡ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.