ವೀರಾಜಪೇಟೆ, ಡಿ. ೨: ತೋಟದ ಕೆಲಸದವರಿಗೆ ಸಂಬಳ ವಿತರಿಸಿ ಬರುತ್ತೇನೆ ಎಂದು ತೆರಳಿದ್ದ ವ್ಯಕ್ತಿ ಕಾಣೆಯಾಗಿದ್ದು, ನಂತರದಲ್ಲಿ ಶವವಾಗಿ ಪತ್ತೆಯಾದ ಘಟನೆ ವೀರಾಜಪೇಟೆ ಹೊರವಲಯ ನಾಂಗಾಲ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ ಗ್ರಾಮದ ನಿವಾಸಿ ದಿ. ಬೊಪ್ಪಂಡ ರಾಜ ಮಾಚಯ್ಯ ಎಂಬವರ ಪುತ್ರ ವಸಂತ್ ಅಯ್ಯಪ್ಪ (೪೬)ಮೃತ ವ್ಯಕ್ತಿ.

ವಸಂತ್ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ತಾ. ೧ರಂದು ಬೆಳಿಗ್ಗೆ ಎಂದಿನAತೆ ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಲು ದ್ವಿಚಕ್ರ ವಾಹನದಲ್ಲಿ ಬಿಟ್ಟಂಗಾಲಕ್ಕೆ ಬಂದಿದ್ದಾರೆ. ಮಕ್ಕಳನ್ನು ಬಿಟ್ಟು ನಾಂಗಾಲದ ಮನೆಗೆ ಆಗಮಿಸಿದ್ದಾರೆ. ಪತ್ನಿಗೆ ತೋಟದಲ್ಲಿದ್ದ ಕೆಲಸದಾಳುಗಳಿಗೆ ಸಂಬಳ ನೀಡಿ ಬರುವದಾಗಿ ಹೇಳಿ ತೋಟಕ್ಕೆ ತೆರಳಿದ್ದಾರೆ. ಸಂಜೆಯಾದರೂ ಮನೆಗೆ ಆಗಮಿಸದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲೆಡೆ ಹುಟುಕಾಟ ಮಾಡಿದ್ದಾರೆ. ನೆರೆಕರೆಯವರೊಂದಿಗೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತ್ನಿ ಶಕುಂತಲ ಅವರು ಮತ್ತು ಸಂಬAಧಿಕರು ಗ್ರಾಮಾಂತರ ಪೊಲೀಸ್ ಠಾಣೆಗೆ ವಸಂತ್ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು.

ದೂರು ಸ್ವೀಕರಿಸಿದ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದಾಗ ಇಂದು ಬೆಳಿಗ್ಗೆ ನಾಂಗಾಲದ ಪೊಗ್ಗರೆ ಕೆರೆ ಬಳಿ ರಸ್ತೆಯ ಅಂಚಿನಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿದೆ. ಮುಳುಗು ತಜ್ಞ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಕರೆಯನ್ನು ಶೋಧನೆ ಮಾಡಿದ ಸಂದರ್ಭ ವಸಂತ್ ಅವರ ಶವ ಪತ್ತೆಯಾಗಿದೆ.

ಸ್ಥಳಕ್ಕೆ ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಸಿದ್ದಲಿಂಗ ಬಿ ಬಾಣಸೆ ಮತ್ತು ಎ.ಎಸ್.ಐ. ಸುಬ್ರಮಣಿ ಅವರು ಭೇಟಿ ನೀಡಿ ಮಹಜರು ಮಾಡಿದರು. ಮೃತ ಶರೀರವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತರ ಪತ್ನಿ ಶಕುಂತಲ ಅವರು ಪತಿ ನೀರಿನಲ್ಲಿ ಮುಳುಗಿ ಸತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ೧೭೪ (ಸಿ)ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- ಕಿಶೋರ್ ಕುಮಾರ್ ಶೆಟ್ಟಿ.