ಬೆಂಗಳೂರು, ಡಿ. ೨: ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಕಂಡು ಬಂದಿದೆ. ಈ ಬೆನ್ನಲ್ಲೇ ಹೊಸ ಕೋವಿಡ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದೇಶದ ಮೊದಲ ಓಮಿಕ್ರಾನ್ ಪ್ರಕರಣವು ಕರ್ನಾಟಕದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಹೊಸ ಮಾರ್ಗಸೂಚಿಯನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು. ಕಳೆದ ವಾರದಲ್ಲಿ ಭಾರತವು ಅಪಾಯಯುತ ದೇಶ ಎಂದು ಗುರುತು ಮಾಡಿರುವ ೧೩ ದೇಶಗಳಿಂದ ಕರ್ನಾಟಕಕ್ಕೆ ಬಂದಿಳಿದ ಎಲ್ಲರಿಗೂ ಕೊರೊನಾ ವೈರಸ್ ಪರೀಕ್ಷೆಯನ್ನು ಮಾಡಿಸಲಾಗಿದೆ. ಈ ಹಿಂದೆ ನಾವು ಪತ್ತೆ ಮಾಡಿದ ರೂಪಾಂತರಗಳಿಗಿAತ ಈ ಭಿನ್ನವಾದ ರೂಪಾಂತರವು ಕಂಡು ಬಂದ ಬಳಿಕ ಅವುಗಳನ್ನು ಜೀಮೋಮ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ಪರೀಕ್ಷೆಯ ವರದಿಯು ಬಂದಿದ್ದು, ಈ ಎರಡು ರೂಪಾಂತರಗಳು ಓಮಿಕ್ರಾನ್ ಎಂದು ದೃಢಪಟ್ಟಿದೆ ಎಂದು ಹೇಳಿದರು. ಇದು ನಮಗೆ ಒಂದು ದೊಡ್ಡ ಸವಾಲು ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ನಾವು ತಜ್ಞರಿಂದ ಈ ಬಗ್ಗೆ ಸಲಹೆಯನ್ನು ಪಡೆಯುತ್ತಿದ್ದೇವೆ.

(ಮೊದಲ ಪುಟದಿಂದ) ಯಾವುದೇ ನಿರ್ಬಂಧವನ್ನು ಜಾರಿ ಮಾಡದಿದ್ದರೆ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳು ಲಾಕ್‌ಡೌನ್ ಅಥವಾ ಕರ್ಫ್ಯೂನ ಸುಳಿವನ್ನು ನೀಡಿದ್ದಾರೆ. ವಿದೇಶದಿಂದ ಬರುವ ಯಾರೇ ಆದರೂ ಬೇರೆ ಜನರ, ನಿಮ್ಮ ಪ್ರೀತಿ ಪಾತ್ರರ ಸುರಕ್ಷತೆಗಾಗಿ ತಮ್ಮನ್ನು ತಾವು ಸುರಕ್ಷಿತವಾಗಿ ನೋಡಿಕೊಳ್ಳಿ. ದಕ್ಷಿಣ ಆಫ್ರಿಕಾ ಹಾಗೂ ಯುರೋಪಿಯನ್ ದೇಶಗಳಿಂದ ಬರುವ ಜನರ ಮೇಲೆ ನಾವು ತೀವ್ರ ನಿಗಾ ಇರಿಸಿದ್ದೇವೆ. ದಕ್ಷಿಣ ಆಫ್ರಿಕಾದಿಂದ ಬರುವ ಜನರ ಪರೀಕ್ಷೆಯನ್ನು ನಾವು ಮಾಡುತ್ತಿದ್ದೇವೆ ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದಿಂದ ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿರುವ ೬೬ ವರ್ಷದ ಓರ್ವ ವೃದ್ಧ ಹಾಗೂ ೪೬ ವರ್ಷದ ವ್ಯಕ್ತಿಗೆ ಸೋಂಕು ಕಂಡು ಬಂದಿತ್ತು. ಒಮಿಕ್ರಾನ್ ಪ್ರಕರಣ ಪತ್ತೆ ಹಚ್ಚಲು ಜಿನೋಮ್ ಪರೀಕ್ಷೆ ಸೇರಿದಂತೆ ಹೆಚ್ಚಿನ ತಪಾಸಣೆಗೆ ಸ್ಯಾಂಪಲ್‌ಗಳನ್ನು ಕಳಿಸಲಾಗಿತ್ತು. ಇಂದು ಒಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಭಾರತದಲ್ಲಿ ಇದುವರೆಗೆ ಒಮಿಕ್ರಾನ್ ರೂಪಾಂತರದ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಗುರುವಾರ ಪ್ರಕಟಸಿದ್ದಾರೆ. ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲೇ ಪತ್ತೆಯಾಗಿವೆ. ಸುಮಾರು ೨೯ ದೇಶಗಳು ಇಲ್ಲಿಯವರೆಗೆ ೩೭೩ ಒಮಿಕ್ರಾನ್ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿದೆ. ಪ್ರಸ್ತುತ ಪ್ರಪಂಚದಾದ್ಯAತ ಕೋವಿಡ್ ೧೯ ಉಲ್ಬಣವು ಕಂಡುಬAದಿದೆ ಎಂದು ಸಚಿವಾಲಯ ಹೇಳಿದೆ.

ಈ ನಡುವೆ ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಎರಡಲ್ಲ ಐದು ಜನಕ್ಕೆ ಹರಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಓಮಿಕ್ರಾನ್ ವೈರಸ್ ಸೋಂಕಿತ ಐದು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ರಾಜ್ಯದಲ್ಲಿ ಐದು ಜನರಿಗೆ ಓಮಿಕ್ರಾನ್ ವೈರಸ್ ತಗುಲಿರುವುದು ದೃಢಪಟ್ಟಿದೆ. ೪೬ ವರ್ಷದ ಸೋಂಕಿತ ವ್ಯಕ್ತಿ ನವೆಂಬರ್ ೨೦ ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿರುತ್ತಾರೆ. ಮೂರು ದಿನ ಮಾತ್ರ ಹೊಟೇಲ್‌ನಲ್ಲಿ ಕ್ವಾರಂಟೈನ್ ಆಗಿದ್ದರು. ಮೂರು ದಿನಗಳ ನಂತರ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ಬಂದಿದೆ. ಈ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಪರೀಕ್ಷೆ ಬಳಿಕ ಇವರು ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿದ್ದಾರೆ. ನಂತರ ಅವರು ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಇವರ ಕಂಪೆನಿ ಬೋರ್ಡ್ ಮೀಟಿಂಗ್‌ನಲ್ಲಿ ಆರು ಜನ ಭಾಗಿಯಾಗಿದ್ದರು. ಹೋಮ್ ಕ್ವಾರಂಟೈನ್ ಆಗದೇ ಮೀಟಿಂಗ್‌ನಲ್ಲಿ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಪ್ರಥಮ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು ಮಾದರಿಗಳನ್ನು ಪರೀಕ್ಷೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.