ಕುಶಾಲನಗರ, ಡಿ. ೧: ಕೂಲಿ ಕಾರ್ಮಿಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡುಹಾರಿಸಿದ ಘಟನೆಯೊಂದು ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ರಾಣಿ ಗೇಟ್ ಬಳಿ ನಡೆದಿದೆ.

ರಾಣಿ ಗೇಟ್ ಗಿರಿಜನ ಹಾಡಿಯ ನಿವಾಸಿ ಬಸವ (೩೫) ಗುಂಡು ತಗಲಿ ತೀವ್ರ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿರಿಯಾಪಟ್ಟಣ ಅರಣ್ಯ ವಲಯದ ಕೊಪ್ಪ ವ್ಯಾಪ್ತಿಯ ವನಪಾಲಕ ಮಂಜುನಾಥ ಮತ್ತು ದಿನಗೂಲಿ ನೌಕರರಾದ ಸುಬ್ರಮಣಿ, ಸಿದ್ಧ ಸೇರಿದಂತೆ ನಾಲ್ವರು ಬಸವನ ಮೇಲೆ ಏಕಾಏಕಿ ಕೋವಿಯಿಂದ ಗುಂಡು ಹಾರಿಸಿರುವುದಾಗಿ ಗಾಯಾಳು ಬಸವನ ಸ್ನೇಹಿತನಾದ ಚಂದ್ರ ಎಂಬವರು ಮಾಹಿತಿ ನೀಡಿದ್ದಾರೆ.

ವೈಯಕ್ತಿಕ ದ್ವೇಷ ಘಟನೆಗೆ ಕಾರಣ ಎಂದು ಅವರು ತಿಳಿಸಿದ್ದಾರೆ. ಗಾಯಾಳು ಬಸವ ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ. ಸೊಂಟ ಭಾಗಕ್ಕೆ ಗುಂಡು ತಗಲಿದ್ದು ಪ್ರಾಣಾಪಾಯದಿಂದ ಪಾರಾಗಿರುವ ದಾಗಿ ವೈದ್ಯರು ತಿಳಿಸಿದ್ದಾರೆ.

ಸ್ಥಳಕ್ಕೆ ಬೈಲುಕೊಪ್ಪ ಠಾಣಾಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಘಟನೆಗೆ ಸಂಬAಧಿಸಿ ದಂತೆ ಬೈಲುಕೊಪ್ಪ ಪೊಲೀಸ್ ಠಾಣೆ ಯಲ್ಲಿ ಮೊಕದ್ದಮೆ ದಾಖಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ತನಿಖೆ ಮುಂದುವರಿದಿದೆ.