ಮಡಿಕೇರಿ, ಡಿ. ೧: ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗವನ್ನು ಪಂಚಾಯ್ತಿಯವರು ಕಬಳಿಸಲು ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಸ್ಥಳವನ್ನು ಗೋಮಾಳಕ್ಕಾಗಿ ಕಾಯ್ದಿರಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ತರಾದ ಚೆಟ್ಟಿಮಾಡ ಕಾರ್ಯಪ್ಪ ಅವರು; ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ.ನಂ.೭೭/೨ಎಪಿ೮ ಹಾಗೂ ಸ.ನ.೮೮/೧ ರಲ್ಲಿನ ಒಟ್ಟು ೫.೫೦ ಎಕರೆ ಜಾಗದಲ್ಲಿ ಈ ಹಿಂದೆ ಪಂಚಾಯ್ತಿ ವತಿಯಿಂದ ಸಾಮಾಜಿಕ ಅರಣ್ಯ ಇಲಾಖೆ ಮೂಲಕ ಗಾಳಿ, ಅಕೇಶಿಯಾ, ಸಿಲ್ವರ್ ಮರಗಳನ್ನು ಬೆಳೆಯಲಾಗಿತ್ತು. ನಂತರ ಅದನ್ನು ನಿರ್ವಹಣೆ ಮಾಡದೆ ಪಾಳು ಬಿದ್ದಿತ್ತು. ಇದೀಗ ಪಂಚಾಯ್ತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ಕಬಡಕೇರಿ ವಾರ್ಡ್ ಸದಸ್ಯರು ಸೇರಿ ಮರಗಳನ್ನು ಕಡಿದು ಬೇಲಿ ನಿರ್ಮಿಸಿದ್ದಾರೆ. ಈ ಬಗ್ಗೆ ವಿಚಾರಿಸಲಾಗಿ ಕಂದಾಯ ಇಲಾಖೆಯಿಂದ ಅನುಮತಿ ಪಡೆದುಕೊಂಡಿರುವದಾಗಿ ಹೇಳುತ್ತಾರೆ. ಕಂದಾಯ ಅಧಿಕಾರಿಗಳನ್ನು ವಿಚಾರಿಸಿದಾಗ ಪಂಚಾಯಿತಿಗೆ ಜಾಗ ವಹಿಸಿರುವದಾಗಿ ಹೇಳುತ್ತಾರೆ. ಈ ಬಗ್ಗೆ ತಹಶೀಲ್ದಾರರು, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವದೇ ಸ್ಪಂದನವಿಲ್ಲದAತಾಗಿದೆ. ಅಲ್ಲದೆ, ಅರಣ್ಯ ಇಲಾಖೆಗೆ ದೂರು

ಸಲ್ಲಿಸಿದ್ದು, ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪಂಚಾಯ್ತಿ ಅಧಿಕಾರಿಗೆ ನೋಟೀಸ್ ಜಾರಿ ಮಾಡಿದ್ದರೂ ಅಧಿಕಾರಿ ಯಾವದೇ ಪ್ರತಿಕ್ರಿಯೆ ನೀಡಿರುವದಿಲ್ಲವೆಂದು ಹೇಳಿದರು.

ಜನಸಾಮಾನ್ಯರು ಸ್ವಂತ ಜಾಗದಲ್ಲಿ

(ಮೊದಲ ಪುಟದಿಂದ) ಸ್ವಬಳಕೆಗೆ ಮರ ಕಡಿದರೆ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆಯಾಗಲೀ ಜಿಲ್ಲಾಡಳಿತ ವಾಗಲೀ ಮೌನ ವಹಿಸುತ್ತಿರುವುದೇಕೆ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ, ಬೇಲಿ ಹಾಕಿರುವ ಜಾಗವನ್ನು ಕ್ರಮೇಣವಾಗಿ ಕಬಳಿಸುವ ಹುನ್ನಾರ ಇದರಲ್ಲಿ ಅಡಗಿರುವದಾಗಿ ಆರೋಪಿಸಿದರು.

ಗೋಮಾಳಕ್ಕೆ ಮೀಸಲಿಡಿ

ಹೊದ್ದೂರು ಗ್ರಾಮದಲ್ಲಿ ೨೪೦೦ ಎಕರೆ ವಿಸ್ತೀರ್ಣವಿದ್ದು, ೨೫೦ ಕೃಷಿ ಕುಟುಂಬಗಳು, ೮ಕಾಲೋನಿಗಳಿವೆ. ೭೩೦ರಷ್ಟು ಜಾನುವಾರುಗಳಿದ್ದು ಇವುಗಳಿಗೆ ಮೇವಿಗೆ ಜಾಗವಿಲ್ಲ ದಂತಾಗಿದೆ. ಹಾಗಾಗಿ ಈಗ ಮರ ಕಡಿದಿರುವ ಜಾಗವನ್ನು ಕಬಳಿಸಲು ಖಂಡಿತಾ ಬಿಡುವದಿಲ್ಲ, ಈ ಜಾಗವನ್ನು ಗೋಮಾಳಕ್ಕೆ ಮೀಸಲಿಡುವಂತೆ ಒತ್ತಾಯಿಸಿದರಲ್ಲದೆ, ಈ ಸಂಬAಧ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವದಾಗಿ ಹೇಳಿದರು. ಗೋಮಾಳಕ್ಕೆ ಮೀಸಲಿಡದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವದಾಗಿ ಹೇಳಿದರು. ಗೋಷ್ಠಿಯಲ್ಲಿ ಚೌರೀರ ರಮೇಶ್ ಕಾವೇರಪ್ಪ, ರವಿ ಕೋರನ, ಮೇಕಂಡ ಗಣೇಶ್, ಚೆಟ್ಟಿಮಾಡ ಲೋಕೇಶ್, ಮೇಕಂಡ ಸುನಿಲ್ ಮಾದಪ್ಪ ಇದ್ದರು.