ಮಡಿಕೇರಿ, ಡಿ. ೧: ಸಮಾನತೆ, ಸ್ವಾತಂತ್ರö್ಯ ಮತ್ತು ಭ್ರಾತೃತ್ವದ ಮಹತ್ವವನ್ನು ೧೨ನೇ ಶತಮಾನದಲ್ಲೆ ಕನ್ನಡ ನಾಡಿನ ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆಂದು ನಗರದ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕುಮಾರ ಅವರು ಸ್ಮರಿಸಿದರು. ಕಾಲ ಕಾಲಕ್ಕೆ ಕನ್ನಡ ನೆಲದ ಸಾಹಿತಿಗಳು ಸಮಾಜಕ್ಕೆ ತಮ್ಮ ಸಾಹಿತ್ಯದ ಮೂಲಕ ಸಂದೇಶಗಳನ್ನು ನೀಡುತ್ತಲೆ ಕನ್ನಡವನ್ನು ಶ್ರೀಮಂತಗೊಳಿಸಿರುವುದಾಗಿ ಅಭಿಪ್ರಾಯಿಸಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ೪ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ಸ್ಪರ್ಧಾ ಕಾರ್ಯಕ್ರಮಗಳನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪಂಪ, ರನ್ನ, ಪೊನ್ನರಂತಹ ಹಳೆಗನ್ನಡ ಸಾಹಿತಿಗಳು ಪೌರಾಣಿಕ ಪಾತ್ರಗಳನ್ನು ಆಧರಿಸಿ ರಚಿಸಿರುವ ಸಾಹಿತ್ಯ ಕೃತಿಗಳು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿರುವುದಾಗಿ ಅವರು ನುಡಿದರು.

ರಾಘವಾಂಕ, ಹರಿಹರ ಹೀಗೆ ಹತ್ತು ಹಲ ಸಾಹಿತಿಗಳಿಂದ ರಚಿಸಲ್ಪಟ್ಟ ಸಾಹಿತ್ಯ ಗಾಢ ಪ್ರಭಾವವನ್ನು ಸಮಾಜದ ಮೇಲೆ ಬೀರಿದೆ. ಸತ್ಯಹರಿಶ್ಚಂದ್ರ ನಾಟಕದ ಪ್ರಭಾವ ಮಹಾತ್ಮಾ ಗಾಂಧೀಜಿಯವರನ್ನು ಹುಟ್ಟು ಹಾಕಿತೆಂದು ತಿಳಿಸಿದ ಕುಮಾರ ಅವರು, ೧೨ನೇ ಶತಮಾನದ ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ‘ಕಾಯಕವೇ ಕೈಲಾಸ’ ಎನ್ನುವ ಅತ್ಯಂತ ಬಹುಮೂಲ್ಯವಾದ ಸಂದೇಶವನ್ನು ಸಾರಿದರಾದರೆ, ಕನಕದಾಸರು ‘ಅಂಬಲಿ ಕಂಬಳಿ’ ಎನ್ನುವ ಎರಡೇ ಶಬ್ದದ ಮೂಲಕ ಸ್ವಾರ್ಥ ರಹಿತವಾದ ಸರಳ ಬದುಕಿನ ಮಹತ್ವವನ್ನು ಸಾರುವುದರೊಂದಿಗೆ ಕನ್ನಡ ಸಾಹಿತ್ಯವನ್ನು ಉತ್ತುಂಗ ಶಿಖರಕ್ಕೇರಿಸಿದರೆಂದು ತಿಳಿಸಿ, ಆಧುನಿಕ ಸಾಹಿತ್ಯದಲ್ಲಿ ಮುದ್ದಣ್ಣ, ಕುವೆಂಪು ಸಾಹಿತ್ಯವನ್ನು ಉದಾಹರಿಸಿದ ಕುಮಾರ ಅವರು, ಪ್ರಸ್ತುತ ಮಹಿಳಾ ಸಾಹಿತ್ಯವೂ ಉತ್ತಮವಾಗಿ ಮೂಡಿ ಬರುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪತ್ರಿಕಾ ಭವನ ಟಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಮಾತನಾಡಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗವು ಸಾಹಿತ್ಯ ಪರ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವುದಾಗಿ ಹೇಳಿದರು. ಬಳಗದ ಅಧ್ಯಕ್ಷರಾದ ಕೇಶವ ಕಾಮತ್ ಅವರು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಕನ್ನಡ ಪರ ಕಾರ್ಯಕ್ರಮಗಳಿಗೆ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಬಳಗದ ಅಧ್ಯಕ್ಷರಾದ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಸಂಕಷ್ಟದ ಅವಧಿಯಲ್ಲಿಯೂ ಬಳಗವು ಆನ್ ಲೈನ್ ಮೂಲಕ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಗಾಯಕರನ್ನು ಪರಿಚಯಿಸುವ ಕಾರ್ಯ ನಡೆಸಿದ್ದನ್ನು ಸ್ಮರಿಸಿ, ಮುಂದೆಯೂ ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ನಡೆಸಿಕೊಂಡು ಹೋಗುವ ಭರವಸೆಯನ್ನಿತ್ತರು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್, ಬಳಗದ ಉಪಾಧ್ಯಕ್ಷರಾದ ಮೊಯಿದ್ದೀನ್, ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಉಪಸ್ಥಿತರಿದ್ದರು. ರೇವತಿ ರಮೇಶ್ ತಂಡ ಕನ್ನಡ ನಾಡಗೀತೆಯನ್ನು ಹಾಡಿದರೆ, ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.