ವೀರಾಜಪೇಟೆ, ಡಿ. ೧: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯ ಆಯ್ದ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ ಹೇಳಿದರು.

ವಿರಾಜಪೇಟೆ ಉಪಾಧ್ಯಾಯರ ಸಂಘದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿ ಕರ್ನಾಟಕ ಸರ್ಕಾರ ಸೇವಾ ಸಿಂಧು ಯೋಜನೆಯನ್ನು ಪ್ರಾರಂಭಿಸಿದ್ದು ಸರ್ಕಾರದ ಸೇವೆಗಳು ಸಮಸ್ತ ನಾಗರಿಕರ ಮನೆ ಬಾಗಿಲಿಗೆ ತಲುಪುವಂತೆ ಕಾರ್ಯನಿರ್ವಹಿಸುತ್ತಿದೆ. ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸರ್ಕಾರದ ಯೋಜನೆಗೆ ಕೈ ಜೋಡಿಸಿರುವುದು ಶ್ಲಾಘನೀಯ. ಗ್ರಾಮೀಣ ಭಾಗದ ಜನರಿಗೆ ಸೌಲಭ್ಯಗಳು ದೊರಕುವ ಮೂಲಕ ಕಡುಬಡ ಕುಟುಂಬಗಳು ಅಭಿವೃದ್ಧಿ ಹೊಂದಲಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಡಾ. ಯೋಗೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವರು ಸೇವಾ ಸಿಂಧು ಯೋಜನೆ ಮೂಲಕ ಕರ್ನಾಟಕದ ಎಲ್ಲಾ ಜನ ಸಾಮಾನ್ಯರಿಗೂ ಸೌಲಭ್ಯಗಳು ದೊರಕಲೆಂದು ಡಿಜಿಟಲ್ ಸೇವೆಯನ್ನು ಧರ್ಮಸ್ಥಳ ಯೋಜನೆ ಮೂಲಕ ಜನರಿಗೆ ತಲುಪುವಂತೆ ಮಾಡಿರುವುದರಿಂದ ಇಂದು ಸುಮಾರು ೨೫೦ ಕೇಂದ್ರಗಳು ನಮ್ಮ ಯೋಜನೆ ಮೂಲಕ ಉದ್ಘಾಟನೆಗೊಳ್ಳಲಿದೆ. ಈ ಕೇಂದ್ರಗಳು ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಜನರಿಗೆ ಒದಗಿಸಿಕೊಡುವ ಮುಖ್ಯ ಉದ್ದೇಶವಾಗಿದೆ ಎಂದರಲ್ಲದೆ ಕಳೆದ ೧೩ ವರ್ಷಗಳಿಂದಲು ವೀರಾಜಪೇಟೆ ತಾಲೂಕಿನಲ್ಲಿ ಅನೇಕ ಕಾರ್ಯಕ್ರಮಗಳು ಯೋಜನೆಯ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ಸಂಘದ ಮೂಲಕ ಒದಗಿಸಿ ಕೊಡಲಾಗಿದೆ ಎಂದರು.

ಉಡುಪಿ ಮತ್ತು ಕರಾವಳಿ ಪ್ರಾದೇಶಿಕ ನಿರ್ದೇðಶಕರಾದ ವಸಂತ ಸಾಲ್ಯಾನ್ ಅವರು ಮಾತನಾಡಿ ಡಿಜಿಟಲ್ ಸೇವಾ ಕೇಂದ್ರ ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಾಜೆಕ್ಟ್ ಮೂಲಕ ಅಳವಡಿಸಲಾಗಿದೆ. ಕರ್ನಾಟಕ ಸರ್ಕಾರದ ಸಾಮಾನ್ಯ ನಾಗರಿಕ ಸೇವೆ ಇತರ ಮಾಹಿತಿಯನ್ನು ನೀಡುತ್ತದೆ. ವಿದ್ಯಾವಂತರಿಗೂ ವಿದ್ಯೆ ಇಲ್ಲದವರಿಗೂ ಗ್ರಾಮೀಣ ಭಾಗದ ಎಲ್ಲಾ ಜನರಿಗು ಅನುಕೂಲವಾಗಲಿದ್ದು ಇದು ಪ್ರಧಾನ ಮಂತ್ರಿಗಳ ಯೋಜನೆಯಾಗಿದೆ. ಇದಕ್ಕೆ ಸರ್ಕಾರವೆ ಶುಲ್ಕ ನಿಗದಿಪಡಿಸಿರುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಸುಬ್ರಮಣಿ ಮಾತನಾಡಿ ಎಲ್ಲಾ ವ್ಯವಹಾರಗಳು ಇನ್ನು ಮುಂದೆ ಆನ್ ಲೈನ್‌ನಲ್ಲಿಯೇ ಆಗಬೇಕೆಂದು ಪ್ರಧಾನಿ ಮೋದಿ ಅವರ ಯೋಜನೆಯಾಗಿದೆ. ಉದ್ಘಾಟನೆಗೊಂಡಿರುವ ಸೇವಾ ಸಿಂಧು ಕೇಂದ್ರವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು. ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಯೋಜನಾಧಿಕಾರಿ ಸುರೇಂದ್ರ, ವೀರಾಜಪೇಟೆ -ಮಡಿಕೇರಿ ಯೋಜನಾಧಿಕಾರಿ ಪದ್ಮಯ್ಯ, ಮೇಲ್ವಿಚಾರಕರಾದ ರತ್ನಮೈಪಾಲ ಮತ್ತಿತರರು ಉಪಸ್ಥಿತರಿದ್ದರು.