*ವೀರಾಜಪೇಟೆ, ನ. ೩೦: ವೀರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ನುಡಿಲಹರಿ ಕಾರ್ಯಕ್ರಮದಲ್ಲಿ ಅಂರ‍್ರಾಷ್ಟಿçಯ ಮಟ್ಟದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಹಿರಿಯ ಸಾಹಿತಿ, ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಉಪನ್ಯಾಸಕ ಅರ್ಜುನ್ ಮೌರ್ಯ ಅವರ ಕೃತಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಜಗತ್ತಿನಲ್ಲಿ ಕನ್ನಡ ಕಾವ್ಯಪರಂಪರೆಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಕೇವಲ ಕಾವ್ಯವಲ್ಲದೆ ಅದು ನಿರಂತರದ ಚಳುವಳಿಯಾಗಿದೆ, ಕೊಡಗು ಜಿಲ್ಲೆಯು ಭಾರತದಲ್ಲೇ ವಿಶಿಷ್ಟವಾದ ಜಿಲ್ಲೆಯಾಗಿದ್ದು, ಇಲ್ಲಿನ ಜನರ ಸಂಸ್ಕೃತಿ ಆಚಾರ-ವಿಚಾರಗಳು ವಿಭಿನ್ನವಾಗಿದ್ದು ತನ್ನದೇ ಆದ ಗೌರವವನ್ನು ಹೊಂದಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಹೊಸದಾದ ಕೊಡುಗೆ ಅರ್ಜುನ್ ಮೌರ್ಯ ಅವರು ಕೃತಿಯಾಗಿದೆ ಎಂದರು.
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹಮದ್ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಕನ್ನಡಿಗರು ಹೆಣಗಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಹೊಣೆಗಾರಿಕೆ ಇಂದಿನ ಯುವಜನತೆಯ ಮೇಲಿದೆ. ಕನ್ನಡನಾಡು ನುಡಿ ನೆಲ ಜಲ ವಿಚಾರದಲ್ಲಿ ಎಲ್ಲರೂ ಒಗ್ಗೂಡಿ ಹೋರಾಡಬೇಕಾಗಿರುವುದು ಇಂದಿನ ಅಗತ್ಯತೆ ಕನ್ನಡ ಕಟ್ಟಲು ಕಟ್ಟಾಳುಗಳು ಬೇಕಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಶಾಲನಗರ ಎಂಜಿಎA ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಂಜೇಶ್ ಕೆ.ಆರ್ ಅವರು ಕೃತಿಯ ವಿಮರ್ಶಿಸಿ, ಅರ್ಜುನ್ ಮೌರ್ಯ ಅವರು ರಾಜ್ಯಮಟ್ಟದ ಬರಹಗಾರರ ಸಾಲಿಗೆ ಸೇರುತ್ತಾರೆ. ಇವರ ಕಾವ್ಯಲೋಕ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಬಲ್ಲದು. ಕಾವ್ಯವಸ್ತುಗಳನ್ನು ಗಮನಿಸಿದಾಗ ಕವಿಗಳು ಯಾವುದೇ ಚೌಕಟ್ಟಿಗೆ ಒಳಗಾಗದೆ ನಿರ್ಭೀತಿಯಿಂದ ಭಾವಾಭಿವ್ಯಕ್ತಿ ಮಾಡಿದ್ದಾರೆ ಎಂದರು. ಕೃತಿಗೆ ಬೆನ್ನುಡಿ ಬರೆದಿರುವ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರ ಕೃತಿಯ ಬಗೆಗಿನ ಅಭಿಪ್ರಾಯ ಮೆಚ್ಚುವಂತದ್ದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಸೈಂಟ್ ಆನ್ಸ್ ವಿದ್ಯಾಸಂಸ್ಥೆಗಳ ಪರವಾಗಿ ವ್ಯವಸ್ಥಾಪಕರಾದ ರೆ.ಫಾ. ಮದಲೈ ಮುತ್ತು ಹಾಗೂ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರನ್ನು ಸನ್ಮಾನಿಸಿ ಗೌರವಿಸಿದರು. ಜೊತೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ್ ಕಾಮತ್ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಮಾತನಾಡಿ, ಕನ್ನಡ ಭಾಷೆಮಾತ್ರವಲ್ಲ, ಅದು ಭಾವನೆ-ಬದುಕು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೇ ನಮ್ಮ ಭಾಷೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿರುವುದು ನಮ್ಮ ದುರ್ದೈವ ಎಂದು ವಿಷಾದ ವ್ಯಕ್ತಪಡಿಸುತ್ತಾ, ವಿದ್ಯಾರ್ಥಿಗಳಲ್ಲಿ ಕನ್ನಡತನದ ಪ್ರಜ್ಞೆಯನ್ನು ತುಂಬಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತುರವರು ಮಾತನಾಡುತ್ತಾ ಕಾಲೇಜಿನ ಕನ್ನಡ ಭಾಷಾ ವಿಭಾಗದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಇನ್ನೂ ಹೆಚ್ಚು ಇಂತಹ ಕಾರ್ಯಕ್ರಮಗಳು ನಡೆಯುವುದರ ಮುಖಾಂತರ ಕನ್ನಡ ಕಟ್ಟುವ ಕಾರ್ಯವಾಗಬೇಕು ಎಂದರು. ಕಾಲೇಜಿನ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ ತೃಪ್ತಿ, ಕವರ ಕೃತಿಯ ಲೇಖಕರು ಹಾಗೂ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಅರ್ಜುನ್ ಮೌರ್ಯ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸೈಂಟ್ ಆನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಮಾರಂಭದ ನಿರೂಪಣೆಯನ್ನು ಕನ್ನಡ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ, ಸ್ವಾಗತವನ್ನು ಅರ್ಥಶಾಸ್ತç ಉಪನ್ಯಾಸಕರಾದ ಶಾಂತಿಭೂಷಣ್, ವಂದನಾರ್ಪಣೆಯನ್ನು ವಿಜ್ಞಾನ ವಿಭಾಗದ ರಶ್ಮಿ ನೆರವೇರಿಸಿದರು. ವಿವಿಧ ಕ್ಷೇತ್ರದ ಗಣ್ಯರುಗಳು, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.