ಸೋಮವಾರಪೇಟೆ, ನ. ೩೦: ಕನ್ನಡ ರಾಜ್ಯೋತ್ಸವ ದಿನದಂದು ಕತ್ತಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಈಗಲೂ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿರುವ ತಾಲೂಕಿನ ಗರಗಂದೂರು ಗ್ರಾಮದ ೧೦ ನೇ ತರಗತಿ ವಿದ್ಯಾರ್ಥಿನಿಯ ಮನೆಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ವಿದ್ಯಾರ್ಥಿನಿಯ ನರಳಾಟದ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಣ್ಣಯ್ಯ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿನಿ ಹಾಗೂ ಪೋಷಕರಿಂದ ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ ಅಧಿಕಾರಿ ಅಣ್ಣಯ್ಯ ಅವರು, ನಂತರ ಸಂಬAಧಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪುನಿತ್ ಅವರಿಗೆ ದೂರವಾಣಿ ಕರೆ ಮಾಡಿ ಸರಿಯಾಗಿ ದೂರು ದಾಖಲಿಸದ ಬಗ್ಗೆ ವಿಚಾರಿಸಿದರು. ದೂರುದಾರರು ಸರಿಯಾಗಿ ದೂರು ನೀಡದ ಹಿನ್ನೆಲೆಯಲ್ಲಿ ಈ ಸಮಸ್ಯೆಯಾಗಿದೆ. ಮತ್ತೊಮ್ಮೆ ವಿದ್ಯಾರ್ಥಿನಿಯ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅಣ್ಣಯ್ಯ, ವಿದ್ಯಾರ್ಥಿನಿಗೆ ಆಳವಾದ ಗಾಯವಾಗಿದ್ದು, ಕುತ್ತಿಗೆಯನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಅವಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದು, ತಕ್ಷಣವೇ ನೀಡಬೇಕಾಗಿದೆ ಎಂದು ಅಭಿಪ್ರಾಯಿಸಿದರು.