ಗೋಣಿಕೊಪ್ಪಲು, ನ. ೩೦: ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಿಗೆ ಪೊಲೀಸರು ರಾತ್ರಿಯ ವೇಳೆಯಲ್ಲಿ ಬೀಟ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ದಲಿತ ಮುಖಂಡರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರು. ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಡಿವೈಎಸ್ಪಿ ಜಯಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ದಲಿತ ಮುಖಂಡರ ಸಭೆಯಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ದಲಿತ ಮುಖಂಡರು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ವೀರಾಜಪೇಟೆಯ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಹೋರಾಟದ ಮುಂಚೂಣಿಯಲ್ಲಿರುವ ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ಕೆಲವರು ದುರುದ್ದೇಶ ಪೂರ್ವಕವಾಗಿ ಪೊಲೀಸ್ ಪ್ರಕರಣ ದಾಖಲಿಸುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. ಇವುಗಳಿಗೆ ಕಡಿವಾಣ ಹಾಕಬೇಕು. ದಲಿತರ ಮೇಲೆ ದೌರ್ಜನ್ಯ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ನ್ಯಾಯಾಲಯದಲ್ಲಿ ತಕ್ಕ ಶಿಕ್ಷೆಯಾಗಲು ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ವಿವಿಧೆಡೆ ದಲಿತರಿಗೆ ಸ್ಮಶಾನವಿಲ್ಲದೆ ಕಷ್ಟ ಎದುರಿಸುತ್ತಿದ್ದಾರೆ. ಅಂತಹ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ನಿಗಧಿ ಪಡಿಸಲು ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಮನವಿ ಮಾಡಿದರು.

ಅಮ್ಮತ್ತಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಮಾತನಾಡಿ, ಬಡವರ ಪಾಲಿನ ಪಡಿತರ ವಸ್ತುಗಳು ಇನ್ನು ಕೂಡ ಸಂಬAಧಪಟ್ಟ ಬಡವರಿಗೆ ನ್ಯಾಯಯುತವಾಗಿ ತಲುಪುತ್ತಿಲ್ಲ. ಪಡಿತರ ವಸ್ತುಗಳನ್ನು ಇತರರು ಪಡೆದುಕೊಂಡು ತೆರಳುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಅರ್ಹ ಫಲಾನುಭವಿ ನ್ಯಾಯ ಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ವ್ಯವಸ್ಥೆಯಡಿಯಲ್ಲಿ ತನ್ನ ಪಾಲಿನ ಪಡಿತರವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಕಡ್ಡಾಯಗೊಳಿಸಬೇಕು, ಅಮ್ಮತ್ತಿ ಭಾಗದಲ್ಲಿ ಇರುವ ಪೊಲೀಸ್ ಉಪಠಾಣೆಯ ಕಚೇರಿಯು ಶಿಥಿಲಾವಸ್ಥೆಯಲ್ಲಿದ್ದು ಇದನ್ನು ಕೂಡಲೇ ದುರಸ್ತಿಪಡಿಸಬೇಕು. ಇಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ರಕ್ಷಣೆ ಸಿಗುವಂತಾಗಬೇಕು ಎಂದು ಅಧಿಕಾರಿಗಳು ಗಮನ ಸೆಳೆದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ, ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ, ಮುಂಜಾನೆ ವೇಳೆಯಲ್ಲಿ ನಿಯಮಬಾಹಿರವಾಗಿ ಬ್ರಾಂದಿ ಅಂಗಡಿ ತೆರೆದಿರುವುದು, ಬಸ್ ತಂಗುದಾಣದಲ್ಲಿ ಮದ್ಯ ವ್ಯಸನಿಗಳ ಹಾವಳಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಕೃಷ್ಣಪ್ಪ ಬೆಳ್ಳೂರು ಮಾತನಾಡಿ, ಹೈಸೊಡ್ಲೂರು ಗ್ರಾಮದಲ್ಲಿ ಶೆಡ್ ನಿರ್ಮಿಸಿಕೊಂಡಿರುವ ಬಡವರಿಗೆ ಕೂಡಲೇ ನಿವೇಶನ ಮಂಜೂರು ಮಾಡಲು ಸರ್ಕಾರಕ್ಕೆ ಪೊಲೀಸ್ ಇಲಾಖೆಯಿಂದ ಒತ್ತಾಯ ಮಾಡುವಂತೆ ಮನವಿ ಮಾಡಿದರು.

ವಿವಿಧ ಭಾಗದಿಂದ ಆಗಮಿಸಿದ್ದ ದಲಿತ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದ ಡಿವೈಎಸ್ಪಿ ಜಯಕುಮಾರ್ ಕಾಲೋನಿಗಳಲ್ಲಿ ಬೀಟ್‌ಅನ್ನು ಬಿಗಿಗೊಳಿಸಲಾಗುವುದು ಯಾವುದೇ ಘಟನೆಗಳು ಸಂಭವಿಸಿದರೆ ಕೂಡಲೇ ೧೧೨ ಸಹಾಯ ವಾಣಿಯನ್ನು ಸಂಪರ್ಕಿಸಬಹುದು. ದಿನದ ೨೪ ಗಂಟೆ ಪೊಲೀಸರು ಸೇವೆಯಲ್ಲಿ ಲಭ್ಯವಿರುತ್ತಾರೆ. ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು. ಈ ಬಗ್ಗೆ ಗೌಪ್ಯತೆಯನ್ನು ಕಾಪಾಡುವ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ದ್ವಿಚಕ್ರ ವಾಹನದಲ್ಲಿ ವೀಲಿಂಗ್ ನಡೆಸುವ ಯುವಕರ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಗಾಂಜಾ ಮಾರಾಟಗಾರರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆಗಿಂದಾಗ್ಗೆಯೆ ದುರುದ್ದೇಶಪೂರ್ವಕವಾಗಿ ಪ.ಜಾತಿ, ಪಂಗಡದವರ ಮೇಲೆ ದೌರ್ಜನ್ಯ ನಡೆಸುವವರ ಮೇಲೆ ಇಲಾಖೆಯು ಕಠಿಣ ಕ್ರಮ ಕೈಗೊಳ್ಳಲಿದೆ. ಯಾವುದೇ ಸಮಯದಲ್ಲಿ ಅನ್ಯಾಯಕ್ಕೊಳಗಾದವರು ಸಂಬAಧಿಸಿದ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಅಹವಾಲನ್ನು ಸಲ್ಲಿಸಬಹುದು. ನಿಯಮ ಬಾಹಿರವಾಗಿ ಬ್ರಾಂದಿ ಅಂಗಡಿಯನ್ನು ಅವಧಿಗೂ ಮೊದಲೇ ತೆರೆಯುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನದಲ್ಲಿ ವಿವಿಧ ಇಲಾಖೆಯ ತಾಲೂಕು ಅಧಿಕಾರಿಗಳ ಸಮ್ಮುಖದಲ್ಲಿ ಮುಖಂಡರ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದರು. ಸಭೆಯಲ್ಲಿ ಮುಖಂಡರುಗಳಾದ ಕುಮಾರ್ ಮಹಾದೇವ್, ಮಾಯಮುಡಿ ರಮೇಶ್, ಅಭಿಜಿತ್, ಗೋವಿಂದಪ್ಪ, ಪಿ.ಎಸ್. ಮುತ್ತ, ಚಂದ್ರ ಸೇರಿದಂತೆ ಇನ್ನಿತರರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ವೇದಿಕೆಯಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕರಾದ ಶ್ರೀಧರ್, ಕುಟ್ಟ ವೃತ್ತ ನಿರೀಕ್ಷಕರಾದ ಮಂಜಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಜಯರಾಮ್ ಉಪಸ್ಥಿತರಿದ್ದರು.

ಸಭೆಯಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ, ಪೊನ್ನಂಪೇಟೆ ಠಾಣಾಧಿಕಾರಿ ಬಸವರಾಜ್, ಶ್ರೀಮಂಗಲ ಎಸ್.ಐ. ರವಿಶಂಕರ್, ವೀರಾಜಪೇಟೆಯ ಎಸ್.ಐ. ಜಗದೀಶ್, ಸಿದ್ದಲಿಂಗ ಬಾಣಸೆ ಸೇರಿದಂತೆ ಎಎಸ್‌ಐ ದೇವರಾಜ್, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ಜಯರಾಮ್ ಸ್ವಾಗತಿಸಿ, ವಂದಿಸಿದರು.