ಸೋಮವಾರಪೇಟೆ, ನ. ೩೦: ಶಾಲಾ ಆವರಣದಲ್ಲಿದ್ದ ವಿದ್ಯಾರ್ಥಿಗಳಿಗೆ ನಾಯಿಯೊಂದು ಕಚ್ಚಿದ ಪರಿಣಾಮ ಈರ್ವರು ಪುಟಾಣಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣ ದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಗೆ ಸಜ್ಜಾಗುತ್ತಿದ್ದ ವೇಳೆ ನಾಯಿಯೊಂದು ಏಕಾಏಕಿ ಮಕ್ಕಳ ಮೇಲೆ ಧಾಳಿ ನಡೆಸಲು ಆರಂಭಿಸಿತು. ಈ ಅನಿರೀಕ್ಷಿತ ಘಟನೆಯಿಂದ ಗಾಬರಿ ಗೊಂಡ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಈ ನಡುವೆ ೩ನೇ ತರಗತಿಯ ಕಿಶನ್ ಹಾಗೂ ೧ನೇ ತರಗತಿಯ ಧ್ವನಿ ಎಂಬ ಈರ್ವರು ವಿದ್ಯಾರ್ಥಿಗಳ ಕಾಲು ಹಾಗೂ ತೊಡೆಯ ಭಾಗಕ್ಕೆ ನಾಯಿ ಕಚ್ಚಿದೆ. ನಾಯಿ ಧಾಳಿಗೆ ಒಳಗಾದ ಮಕ್ಕಳನ್ನು ಶಿಕ್ಷಕಿಯರು ಹರಸಾಹಸ ಪಟ್ಟು ರಕ್ಷಿಸಿದರು. ಗಾಯಗೊಂಡ ಮಕ್ಕಳನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಮಿಲ್ಗೆçÃಡ್ ಗೊನ್ಸಾಲ್ವೆಸ್ ಅವರು ಪೊಲೀಸ್ ಹಾಗೂ ಪ.ಪಂ.ಗೆ ದೂರು ನೀಡಿದ್ದಾರೆ.

ಇದೇ ನಾಯಿ ಇಂದು ಬೆಳಿಗ್ಗೆ ಕಕ್ಕೆಹೊಳೆ ಜಂಕ್ಷನ್ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪ ಒಟ್ಟು ಆರು ಮಂದಿಯ ಮೇಲೆ ಧಾಳಿ ನಡೆಸಿ, ಗಾಯಗೊಳಿಸಿದೆ. ಇದರೊಂದಿಗೆ ನಾಲ್ಕೈದು ನಾಯಿಗಳಿಗೂ ಕಚ್ಚಿದೆ ಎನ್ನಲಾಗಿದೆ.

ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯರಾದ ಶೀಲಾ ಡಿಸೋಜ, ಬಿ.ಆರ್. ಮಹೇಶ್ ಹಾಗೂ ಎಸ್. ಮಹೇಶ್, ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಆಸ್ಪತ್ರೆಗೆ ತೆರಳಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿ ಕರು ಭಯಾತಂಕದಿAದ ಸಂಚರಿಸು ವಂತಾಗಿದೆ. ಹಲವಷ್ಟು ಬಾರಿ ನಾಯಿಗಳು ಸಾರ್ವಜನಿಕರ ಮೇಲೆ ಧಾಳಿ ನಡೆಸುವುದು, ತಿಂಡಿಯ ಪೊಟ್ಟಣ ತೆಗೆದುಕೊಂಡು ಹೋಗುವ ಮಕ್ಕಳನ್ನು ಕಚ್ಚುವ ಘಟನೆಗಳು ನಡೆಯುತ್ತಿದ್ದು, ಬೀದಿ ನಾಯಿಗಳ ವಿರುದ್ಧ ಪ.ಪಂ. ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.