ಸೋಮವಾರಪೇಟೆ, ನ.೨೯: ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಪ್ರತಿಕಾ ಭವನದಲ್ಲಿ ಜ್ಯೋತಿ ಬಾಪುಲೆ ಅವರ ೧೩೧ನೇ ಸ್ಮರಣ ಕಾರ್ಯಕ್ರಮ ನಡೆಯಿತು.

ಪಕ್ಷದ ಜಿಲ್ಲಾ ಸಂಯೋಜಕ ಮಹಮ್ಮದ್ ಕುಂಞ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಯೋತಿ ಬಾಪುಲೆ ಅವರು ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಶಿಕ್ಷಣ ನೀಡಲು ತಮ್ಮ ಜೀವನವನ್ನು ಸವೆಸಿದರು. ಶಿಕ್ಷಣದಿಂದ ಮಾತ್ರ ಸಮಾಜದ ಅಮಾನವೀಯತೆಯನ್ನು ಹೋಗಲಾಡಿಸಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದರು ಎಂದು ಸ್ಮರಿಸಿದರು.

ಅಸ್ಪೃಶ್ಯರನ್ನು ಸ್ವಾಭಿಮಾನಿಗಳಾಗಿ ಮಾಡುವ ನಿಟ್ಟಿನಲ್ಲಿ ೧೯೪೮ರಲ್ಲಿಯೇ ಶಾಲೆಯನ್ನು ತೆರೆದು ಶಿಕ್ಷಣ ನೀಡಲು ಪ್ರಾರಂಭಿಸಿದರು. ಇದರಿಂದಾಗಿ ಶಾಲೆಯ ಮುಖವನ್ನೇ ನೋಡದೆ ಅದೆಷ್ಟೋ ಮಕ್ಕಳು ಮತ್ತು ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಯಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಸಿದ್ದಪ್ಪ ವಹಿಸಿ ಮಾತನಾಡಿ, ಜ್ಯೋತಿ ಬಾಪುಲೆ ಅವರು ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಕೃತಜ್ಞತೆ ತೋರಬೇಕೆಂದರು.

ಕಾರ್ಯಕ್ರಮದಲ್ಲಿ ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾ ಉಸ್ತುವಾರಿ ಜಯಪ್ಪ ಹಾನಗಲ್ಲು, ಉಪಾಧ್ಯಕ್ಷ ಎ.ಎಸ್. ಜೋಯಪ್ಪ, ಪ್ರಮುಖರಾದ ಎಚ್.ಆರ್. ನಾಗೇಶ್, ಲಕ್ಕಯ್ಯ, ಟಿ.ಕೆ. ಹರೀಶ್, ಗೋವಿಂದರಾಜು, ಕೆ.ಈ. ಕಾಳಪ್ಪ ಮತ್ತಿತರರು ಇದ್ದರು.