ಸೋಮವಾರಪೇಟೆ, ನ.೨೯: ಲೋಕೋಪಯೋಗಿ ಇಲಾಖೆ ಮೂಲಕ ನಡೆಯುತ್ತಿರುವ ೮ ಕೋಟಿ ರೂ. ವೆಚ್ಚದ ಕುಂದಳ್ಳಿ, ಕುಮಾರಳ್ಳಿ, ಬೀದಳ್ಳಿ ರಸ್ತೆ ಕಾಮಗಾರಿ ಕಳಪೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ಪುರುಷೋತ್ತಮ್‌ದಾಸ್ ಹೆಗ್ಗಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಳಪೆ ಕಾಮಗಾರಿ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನಾ ಧರಣಿ ನಡೆಸಿ, ಹಿರಿಯ ಅಧಿಕಾರಿ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಹಾಳಾದ ರಸ್ತೆಯನ್ನು ಸರಿಪಡಿಸಬೇಕು, ರಸ್ತೆಯ ಅಗಲ ೯ ಮೀಟರ್ ಇರಬೇಕು. ಐದೂವರೆ ಮೀಟರ್ ಡಾಮರೀಕರಣವಾಗಬೇಕು. ಚರಂಡಿ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ರಸ್ತೆ ಹಾಳಾದ ಕಡೆಯಲ್ಲಿ ವೆಟ್‌ಮಿಕ್ಸ್ ಹಾಕಿ ಸರಿಪಡಿಸಬೇಕು. ರಸ್ತೆಯ ಎರಡು ಕಡೆ ಎರಡೂವರೆ ಮೀಟರ್ ಜಿಎಸ್‌ಬಿ ಹಾಕಬೇಕು. ಗುಣಮಟ್ಟದ ಚರಂಡಿ ಕೆಲಸ ಮಾಡಬೇಕು. ಜನವರಿ ೩೧ರ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಅಭಿಯಂತರ ನಾಗರಾಜ್ ಅವರಿಗೆ ಅಧೀಕ್ಷಕ ಅಭಿಯಂತರರು ಸೂಚಿಸಿದರು. ಕಾಮಗಾರಿಯ ಬಗ್ಗೆ ಅನುಮಾನ ಬಂದರೆ ಕೂಡಲೆ ಅಧಿಕಾರಿಗಳ ಗಮನಕ್ಕೆ ತರುವಂತೆ ಗ್ರಾಮಸ್ಥರಿಗೆ ಸೂಚಿಸಿದರು.
ಕುಮಾರಳ್ಳಿ ಬಾಚಳ್ಳಿ ಗ್ರಾಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀಧರ್, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತಮ್ಮಯ್ಯ, ಬೀದಳ್ಳಿ ಕಿರಣ್, ಹೆಗ್ಗಡಮನೆ ಉದಯ್, ಗೋಪಾಲ್, ಆರ್.ಟಿ.ಐ ಕಾರ್ಯಕರ್ತ ಬಿ.ಪಿ.ಅನಿಲ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್, ಸೆಕ್ಷನ್ ಇಂಜಿನಿಯರ್ ರಮಣಗೌಡ ಇದ್ದರು.