ಮಡಿಕೇರಿ, ನ. ೨೯: ಕೇರಳ ರಾಜ್ಯದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗು - ಕೇರಳ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊಡಗಿನಿಂದ ಕೇರಳಕ್ಕೆ ಆಗಮಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಗಡಿಯಲ್ಲಿ ಅಗತ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.

ಕೇರಳ ಗಡಿ ಭಾಗವಾದ ಕುಟ್ಟ ಬಳಿ ಪೊಲೀಸರು ಕೇರಳದಿಂದ ಕೊಡಗಿಗೆ ಆಗಮಿಸುವ ಪ್ರತಿ ವಾಹನವನ್ನು ಪರೀಕ್ಷೆಗೊಳಪಡಿಸುತ್ತಿದ್ದು, ಕೋವಿಡ್ ಪರೀಕ್ಷೆಯ ವರದಿ ಇಲ್ಲದಿದ್ದಲ್ಲಿ ಅಂತಹ ವಾಹನ ಹಾಗೂ ನಾಗರಿಕರನ್ನು ವಾಪಸ್ಸು ಕಳುಹಿಸಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ನಾಗರಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಿದ್ದಾರೆ.

ಕೊರೊನಾ ವೈರಾಣುವಿನ ರೂಪಾಂತರಿ ತಳಿ ಓಮಿಕ್ರಾನ್ ಪತ್ತೆಯಾದ ಹಿನೆÀ್ನಲೆಯಲ್ಲಿ ವಿದೇಶದಿಂದ ಆಗಮಿಸಿ ಗಡಿ ಮೂಲಕ ಜಿಲ್ಲೆಗೆ ಪ್ರವೇಶಿಸುವ ನಾಗರಿಕರನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಲಾಗುತ್ತಿದೆ. ಬಹು ಮುಖ್ಯವಾಗಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು ನೆಗೆಟಿವ್ ವರದಿ ಬಂದರಷ್ಟೆ ಕೊಡಗಿನ ಗಡಿಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಕುಟ್ಟ ವೃತ್ತ ನಿರೀಕ್ಷಕರಾದ ಮಂಜಪ್ಪ ಹಾಗೂ ಸಿಬ್ಬಂದಿಗಳು ದಿನದ ವಿವಿಧ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು,

(ಮೊದಲ ಪುಟದಿಂದ) ಕೇರಳದಿಂದ ಆಗಮಿಸುವ ವಾಹನಗಳು ಹಾಗೂ ನಾಗರಿಕರ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು ಕೋವಿಡ್ ನೆಗೆಟಿವ್ ವರದಿ ಹೊಂದಿದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ.

ಕುಟ್ಟದೊಂದಿಗೆ ಮಾಕುಟ್ಟ ಗಡಿಯಲ್ಲೂ ಕೂಡ ತಪಾಸಣೆ ನಡೆಯುತ್ತಿದೆ. ಆರೋಗ್ಯ ಸಹಾಯಕರು, ಸಿಬ್ಬಂದಿಗಳು ವಿವಿಧ ಪಾಳಿಯಲ್ಲಿ ದಿನದ ೨೪ ಗಂಟೆ ಕೆಲಸ ನಿರ್ವಹಿಸುತ್ತಿದ್ದು ಕೇರಳದಿಂದ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಮಾಹಿತಿ ನೀಡಿದ್ದಾರೆ. ಕೇರಳದಿಂದ ಜಿಲ್ಲೆಗೆ ಪ್ರವೇಶ ಮಾಡುವ ನಾಗರಿಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆಯನ್ನು ಪಡೆದಿರಬೇಕು. ಹಾಗೂ ೭೨ ಗಂಟೆಯ ಒಳಗಿನ ಕೋವಿಡ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ತಪ್ಪಿದಲ್ಲಿ ಕೊಡಗಿನ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಗೋಣಿಕೊಪ್ಪಲುವಿನಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಪಡಿಸಿ, ಪ್ರತಿ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಠಾಣಾಧಿಕಾರಿ ಸುಬ್ಬಯ್ಯ ಸೂಚನೆ ನೀಡಿದರು.

ಕರಿಕೆ ಚೆಂಬೇರಿ ಚೆಕ್ ಪೋಸ್ಟ್ಗೆ ಮಡಿಕೇರಿ ತಹಶೀಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಡಿಯಲ್ಲಿ ಪೊಲೀಸ್, ಅಬಕಾರಿ ಸಿಬ್ಬಂದಿಗಳು ನಿತ್ಯ ಕರ್ತವ್ಯದಲ್ಲಿದ್ದು, ಇಂದು ಓರ್ವ ಆರೋಗ್ಯ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ನಿಯೋಜಿಸಿದೆ. ಆದರೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ ಇನ್ನು ಉಳಿದ ಇಲಾಖೆ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿರುವುದು ಕಂಡುಬAದಿಲ್ಲ. ಇರುವ ಓರ್ವ ಆರೋಗ್ಯ ಸಿಬ್ಬಂದಿಗೆ ೨೪ ಗಂಟೆಗಳ ಕಾಲ ಕರ್ತವ್ಯ ನಿರ್ವಹಣೆ ಅಸಾಧ್ಯವಾಗಿದ್ದು, ಹೆಚ್ಚುವರಿ ಒಂದು ತಂಡವನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಬೇಕಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಇಂದು ತೀರಾ ವಿರಳವಾಗಿತ್ತು.

ಅಲ್ಲದೆ ಜನಸಂಚಾರ ಕೂಡ ಕಡಿಮೆಯಿತ್ತು. ಕೆಲವು ಮೂಲದ ಪ್ರಕಾರ ಕೇರಳ ಸರಕಾರ ಕೂಡ ತನ್ನ ಗಡಿಯಲ್ಲಿ ಚೆಕ್ ಪೋಸ್ಟ್ ತೆರೆಯಲು ತೀರ್ಮಾನಿಸಿರುವುದಾಗಿ ತಿಳಿದು ಬಂದಿದ್ದು ಒಂದು ವೇಳೆ ತಪಾಸಣೆ ಆರಂಭಿಸಿದ್ದಲ್ಲಿ ಕೋವಿಡ್ ನಿಯಂತ್ರಣ ಇನ್ನಷ್ಟು ಸುಲಭವಾಗಲಿದೆ. ತಹಶೀಲ್ದಾರ್ ಭೇಟಿ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಬೆಳ್ಯಪ್ಪ, ಗ್ರಾಮ ಲೆಕ್ಕಿಗ ಅನೂಪ್ ಸೇರಿದಂತೆ ಇತರೆ ಸಿಬ್ಬಂದಿ ಹಾಜರಿದ್ದರು.

-ಜಗದೀಶ್, ಉಷಾ ಪ್ರೀತಂ, ಸುಧೀರ್