ಕೂಡಿಗೆ, ನ. ೨೮: ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಬನಶಂಕರಿ ಸಮುದಾಯ ಭವನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹೆಚ್.ಜೆ. ಪರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮೊದಲಿಗೆ ಡಿವಿಡೆಂಟ್ ಸಂಘದ ಸದಸ್ಯರಿಗೆ ಸಮರ್ಪಕವಾಗಿ ಹಂಚಿಕೆ ಅಗುತ್ತಿಲ್ಲ ಎಂದು ಸಂಘದ ಸದಸ್ಯರುಗಳಾದ ಹೆಚ್.ಎಸ್. ಅಶೋಕ್, ಮಧುಕುಮಾರ್ ಜಯಮ್ಮ, ರಾಮಶೆಟ್ಟಿ, ಜಗದೀಶ್ ಪ್ರಸ್ತಾಪಿಸಿದರು. ಎರಡು ವರ್ಷಗಳ ವಾರ್ಷಿಕ ಮಹಾಸಭೆಯ ಡಿವಿಡೆಂಟ್‌ನ ಕಟ್ಟಡದ ನಿಧಿ ಬಳಕೆ ಮಾಡಲಾಗಿದೆ. ಈ ಸಾಲಿನಿಂದ ಸಂಘದ ಸದಸ್ಯರ ಶೇಕಡಾವಾರು ಹಣವನ್ನು ಅವರವರ ಖಾತೆ ಜಮಾ ಮಾಡುವಂತೆ ತಿಳಿಸಿದರು. ಅದಕ್ಕೆ ಸಂಘದ ಅಧ್ಯಕ್ಷ ಪರಮೇಶ್ ಅಡಳಿತ ಮಂಡಳಿಯ ತೀರ್ಮಾನದಂತೆ ಮತ್ತು ಮಹಾಸಭೆ ಅನುಮೋದನೆ ಮೇರೆಗೆ ಕ್ರಮತೆಗೆದುಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಹಾಜರಿದ್ದ ಸದಸ್ಯರ ಸಂಘದ ಅಭಿವೃದ್ಧಿಗೆ ಪೂರಕವಾದ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳ ಬೇಕಾಗುವ ಯೋಜನೆಗಳ ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹೆಚ್.ಜೆ. ಪರಮೇಶ್ ಮಾತನಾಡಿ, ಸಂಘವು ಈ ಸಾಲಿನಲ್ಲಿ ೮,೮೫,೭೧೩ ರೂ. ಲಾಭಾಂಶ ಗಳಿಸಿದೆ. ಸದಸ್ಯರುಗಳ ಸಲಹೆಯನ್ನು ಪಡೆಯಲಾಗಿದೆ. ಮಹಾಸಭೆಯ ತೀರ್ಮಾನದಂತೆ ಸಂಘದ ವತಿಯಿಂದ ಇ-ಸ್ಟಾಪಿಂಗ್ ಕೇಂದ್ರ, ಸಿಮೆಂಟ್ ವ್ಯಾಪಾರ, ಹಾರ್ಡ್ವೇರ್ ಅಂಗಡಿ, ಪಶು ಅಹಾರದ ವ್ಯಾಪಾರ, ಔಷಧಿ ಅಂಗಡಿ ಸೇರಿದಂತೆ ವಿವಿಧ ಹೊಸ ಯೋಜನೆಗಳನ್ನು ಕೈಗೊಳ್ಳಲು ಈಗಾಗಲೇ ಹಂತ ಹಂತವಾಗಿ ಕ್ರಮವನ್ನು ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸಹಕಾರ ಸಚಿವರನ್ನು ಕರೆದು ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಲಾಗುವುದು. ಸಂಘದ ಸದಸ್ಯರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರ ಮೂಲಕ ಸಂಘದ ಅಭಿವೃದ್ಧಿ ಸಹಕಾರಿಗಳಾಗಬೇಕೆಂದು ತಿಳಿಸಿದರು.

ಸಭೆಯ ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್. ಗಿರೀಶ್ ವಾಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಹೆಚ್.ಕೆ. ಕವಿತಾ, ನಿರ್ದೇಶಕರುಗಳಾದ ಜಲೇಂದ್ರ, ದಿನೇಶ್, ಮಣಿಕಂಠ ಮಹದೇವ, ಮೋಹನ್, ರವಿಚಂದ್ರ, ಶಶಿಕಲಾ, ಎಂ.ಎA. ಮಹದೇವ, ಸ್ವಾಮಿ, ಸೋಮಶೇಖರ್ ಸಂಘದ ಮೇಲ್ವಿಚಾರಕ ಹೆಚ್.ಟಿ. ನವೀನ್ ಕುಮಾರ್ ಹಾಜರಿದ್ದರು.