ಮಡಿಕೇರಿ, ನ. ೨೮: ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆಯುವ ಕಾಫಿ, ಅಡಿಕೆ, ಕರಿಮೆಣಸು ಬೆಳೆಗಳು ಉದುರಿ ಹೋಗುತ್ತಿವೆ. ಭತ್ತದ ಇಳುವರಿಯೂ ಕಡಿಮೆಯಾಗಿದೆ. ತಕ್ಷಣವೇ ಸರಕಾರ ರೈತರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅತಿಯಾದ ಮಳೆಯಿಂದ ಹಸುಗಳು, ಮೇಕೆ, ಆಡುಗಳು, ಕೋಳಿಗಳು ಕೂಡ ಸಾಯುತ್ತಿವೆ. ನಮ್ಮ ಜಿಲ್ಲೆಯಲ್ಲಿನ ಗ್ರಾಮ ಪ್ರದೇಶಗಳ ಬಹುತೇಕ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರೊಂದಿಗೆ ದಿನನಿತ್ಯ ಪೆಟ್ರೋಲ್, ಡೀಸೆಲ್ ದರ ಹೆಚ್ಚುತ್ತಿರುವುದರಿಂದ ಈ ಹಾಳು ರಸ್ತೆಗಳಲ್ಲಿ ವಾಹನಗಳನ್ನು ಕೊಂಡೊಯ್ಯುವುದು ಅಸಾಧ್ಯವಾದಂತಾಗಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು.

ಸರಕಾರ ಭತ್ತ ಖರೀದಿ ಕೇಂದ್ರಗಳನ್ನು ಬೇಗನೇ ತೆರೆಯಬೇಕು, ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ತೆರೆಯಬೇಕು, ಸಾಗಾಣಿಕೆ ಖರ್ಚನ್ನು ಸರಕಾರವೇ ಭರಿಸಬೇಕು, ಮಾರುಕಟ್ಟೆಯಲ್ಲಿ ಭತ್ತಕ್ಕೆ ಇರುವ ಬೆಲೆಗಿಂತ ಹೆಚ್ಚಿನ ಬೆಲೆ ಘೋಷಿಸಿ ಆ ಬೆಲೆಯಲ್ಲಿ ರೈತರಿಂದ ಭತ್ತ ಕೊಂಡುಕೊಳ್ಳಲು ಸರಕಾರ ಸೂಕ್ತ ವ್ಯವಸ್ಥೆ ಕೂಡಲೇ ಮಾಡಬೇಕು.

ಕಾಫಿಯಲ್ಲಿ ‘ಔಟ್‌ಟರ್ನ್’ ಹೆಸರಿನಲ್ಲಿ ಖಾಸಗಿ ವ್ಯಾಪಾರಿಗಳು ಬೆಳೆಗಾರರನ್ನು ಲೂಟಿ ಮಾಡುತ್ತಿದ್ದಾರೆ. ಕಾಫಿ ಮಂಡಳಿ ಈ ಬಗ್ಗೆ ಬೆಳೆಗಾರರಿಗೆ ಅನ್ಯಾಯವಾಗದ ರೀತಿ ಒಂದು ವ್ಯವಸ್ಥೆ ಮಾಡಬೇಕು.

೬೬ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಾಣ ಮಾಡುವ ಯೋಜನೆ ಅನುಷ್ಠಾನ ಆಗುವಾಗ ಪರಿಣಾಮಕ್ಕೊಳಗಾಗುವ ಗ್ರಾಮಗಳಲ್ಲಿ ಪ್ರತಿಯೊಂದರಲ್ಲಿ ಗ್ರಾಮ ಸಭೆಯನ್ನು ನಡೆಸಬೇಕು. ಅಲ್ಲಿ ರೈತರ ಸಭೆ ನಡೆಸಬೇಕು. ಮುಂದೆ ಅವರು ಕಳೆದುಕೊಳ್ಳಬಹುದಾದ ಭೂಮಿಯ ಸಂಪೂರ್ಣ ವಿವರವನ್ನು ಮಂಡಿಸಬೇಕು. ಅವರಿಗೆ ಕೊಡಲುದ್ದೇಶಿಸುವ ಬೆಲೆಯ ವಿವರವನ್ನೂ ಮಂಡಿಸಬೇಕು ಮತ್ತು ಅದಕ್ಕೆ ರೈತರ ಒಪ್ಪಿಗೆ ಪಡೆಯುವಂತಾಗಬೇಕು.

ಅತಿವೃಷ್ಟಿಯಿAದಾಗಿ ರೈತರಿಗಾಗುತ್ತಿರುವ ಹಾನಿಯ ಬಗ್ಗೆ ರೈತರ ಸಹಭಾಗಿತ್ವದೊಂದಿಗೆ ಸಮಗ್ರ ಅಧ್ಯಯನ ನಡೆಸಲು ಸರಕಾರ ಮುಂದೆ ಬರಬೇಕು. ಸಣ್ಣ, ಮಧ್ಯಮ ರೈತರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳಾದ ಕೆ.ಹೆಚ್. ಹನೀಫ, ಕೆ.ಎ. ಹಂಸ, ಎಂ.ಎ. ಬಾಪುಟ್ಟಿ ಮತ್ತು ಸಂಚಾಲಕ ಇ.ರ. ದುರ್ಗಾಪ್ರಸಾದ್ ಹಾಜರಿದ್ದರು.