ಮಡಿಕೇರಿ, ನ. ೨೮: ಮಕ್ಕಂದೂರು ಗ್ರಾಮದ ಸರಕಾರಿ ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ ಸತತವಾಗಿ ಶೇ. ೧೦೦ ಫಲಿತಾಂಶ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಧನೆಯ ಹಿಂದಿರುವ ಶಿಕ್ಷಕ ವೃಂದವನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಮಕ್ಕಂದೂರು ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ಅವರು, ಸರ್ಕಾರಿ ಶಾಲೆ ತಮಗೆ ತುಂಬಾ ಪ್ರಿಯವಾಗಿದ್ದು ಶಾಲೆಯು ಯಾವ ವಿನ್ಯಾಸದಲ್ಲಿ ನಿರ್ಮಾಣ ಆಗಿದೆ ಎನ್ನುವುದಕ್ಕಿಂತ ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣ ಮುಖ್ಯವಾಗಿದೆ ಎಂದರು. ಪ್ರಸ್ತುತ ಶಿಕ್ಷಣ ಕ್ಷೇತ್ರ ಒಂದು ಉದ್ಯಮವಾಗಿದ್ದು, ಮಾರ್ಕೆಟಿಂಗ್ ಕೇಂದ್ರವಾಗಿದೆ, ಹಾಗಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಆದರೂ ಸರಕಾರೀ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ, ಸೌಲಭ್ಯಗಳು ಬೇರೆ ಶಾಲೆಗಳಲ್ಲಿ ಸಿಗುವದಿಲ್ಲ, ಹಾಗಾಗಿ ಮಕ್ಕಳಲ್ಲಿ ಕೀಳರಿಮೆ ಇರಬಾರದು, ಸಾಧಕರ ಇತಿಹಾಸ ತಿಳಿಯುವ ಮೂಲಕ ಸರ್ಕಾರಿ ಶಾಲೆಯ ಮಕ್ಕಳು ಸರ್ಕಾರಿ ಹುದ್ದೆಗೆ ಸೇರಿ ಸಮಾಜದಲ್ಲಿರುವ ಬಡತನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ನಗರಸಭೆ ಸದಸ್ಯ ಬಿ.ಎಂ. ರಾಜೇಶ್ ಯಲ್ಲಪ್ಪ ಮಾತನಾಡಿ ಉತ್ತಮ ಸಮಾಜದ ನಿರ್ಮಾಣದ ಸಲುವಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿರುವ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ದಲಿತ ಸಂಘರ್ಷ ಸಮಿತಿಯ ಹೊರತಾಗಿ ಬೇರೆ ಯಾವ ಸಂಘಟನೆಯೂ ಮಾಡುತ್ತಿಲ್ಲ, ಇದು ಹೆಮ್ಮೆಯ ವಿಚಾರ, ಸರಕಾರೀ ಶಾಲೆಯ ಮಕ್ಕಳು ಬೇಧ ಭಾವವಿಲ್ಲದೆ ಚೆನ್ನಾಗಿ ಅಭ್ಯಸಿಸಿ ಶಾಲೆಗೆ ಕೀರ್ತಿ ತರಬೇಕೆಂದು ಹೇಳಿದರು.
ಮತ್ತೋರ್ವ ಅತಿಥಿ ಶಕ್ತಿ ದಿನಪತ್ರಿಕೆಯ ಉಪಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ಶಿಕ್ಷಕರಿಗೆ ಸನ್ಮಾನ ಸಿಗಲು ಕಳೆದ ವರ್ಷ ಶೇ.೧೦೦ರ ಫಲಿತಾಂಶದೊAದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳು ಕಾರಣಕರ್ತರಾಗಿದ್ದು, ಮುಂದಿನ ವರ್ಷವೂ ಶಿಕ್ಷಕರಿಗೆ ಸನ್ಮಾನ ಸಿಗಬೇಕಾದರೆ ಈ ವರ್ಷದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಸಿಸಬೇಕೆಂದರು. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಬಗ್ಗೆ ತಿಳಿದುಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವಂತೆ ಕಿವಿ ಮಾತು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಬಿ. ಐತಪ್ಪ ರೈ ಮಾತನಾಡಿ; ಶಿಕ್ಷಕರು ವಿದ್ಯಾರ್ಥಿಗಳಿಗೆ ಎರಡನೇ ತಾಯಿ ಇದ್ದಂತೆ, ಅವರ ಮಾರ್ಗದರ್ಶನದಂತೆ ನಡೆದು ಶಿಕ್ಷಣದ ನಂತರವೂ ಅವರಿಗೆ ಗೌರವ ಸೂಚಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದ.ಸಂ.ಸ. ಅಧ್ಯಕ್ಷ ಹೆಚ್.ಎಲ್. ದಿವಾಕರ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ, ಶಿಕ್ಷಕರೇ ನಿಜವಾದ ದೇವರುಗಳು ಅವರನ್ನು ಗೌರವಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ವಿದ್ಯಾಭ್ಯಾಸ ದೊಂದಿಗೆ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಏರಬೇಕು ಅದೇ ನಮ್ಮ ಸಂಘಟನೆಯ ಗುರಿ, ಎಸ್ಎಸ್ಎಲ್ಸಿಯಲ್ಲಿ ಶೇ. ೧೦೦ ರಷ್ಟು ಪಲಿತಾಂಶವನ್ನು ಸಾಧಿಸಿರುವ ಕೊಡಗಿನ ಎಲ್ಲಾ ಶಾಲೆಯ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಹೇಳಿದರು.
ದ.ಸಂ.ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಮೂವತ್ತಾಮೂರು ವರ್ಷಗಳಿಂದ ಹಾಗೂ ಸರ್ಕಾರಿ ಶಾಲೆಯಲ್ಲಿ ಶೇ.೧೦೦ ಫಲಿತಾಂಶ ಬಂದAತಹ ಶಾಲಾ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಹತ್ತು ವರ್ಷಗಳಿಂದ ಮಾಡುತ್ತಾ ಬರುತ್ತಿದೆ. ಮಡಿಕೇರಿ ನಗರಸಭೆಗೆ ಒಳಪಟ್ಟ ಮೂರು ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ವಿತರಣೆಯನ್ನು ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ. ಕೆಲ ವರ್ಷಗಳಿಂದ ಪದವಿ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಐಪಿಎಸ್ ತರಬೇತಿ ಶಿಬಿರ ಏರ್ಪಡಿಸುತ್ತಿದ್ದು, ಎಲ್ಲಾ ಕಾರ್ಯಕ್ರಮಗಳ ಮುಖ್ಯ ಉದ್ದೇಶ ಶಿಕ್ಷಣದ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸುಕ್ರುದೇವೇಗೌಡ, ಸಹ ಶಿಕ್ಷಕರುಗಳಾದ ರಾಘವೇಂದ್ರ ಶೆಟ್ಟಿ, ಪ್ರವೀಣ್ಕುಮಾರ್, ಗೀತಾ ಆರ್., ಹರಿಣಾಕ್ಷಿ, ಲೀಲಾವತಿ, ಮಾಲಿನಿ, ಪ್ರಮೀಳಾ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ವಿದ್ಯಾರ್ಥಿನಿಯರಾದ ಪುನಿತಾ, ಕಾವ್ಯ, ಧನ್ಯ, ಪೂಜಾ ಪ್ರಾರ್ಥಿಸಿದರೆ, ನಿರೂಪಣೆಯನ್ನು ಶಾಲೆಯ ಶಿಕ್ಷಕಿ ಗೀತಾ, ವಂದನಾರ್ಪಣೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಸುಕ್ರುದೇವೇಗೌಡ ನೆರವೇರಿಸಿದರು.