ಸಿದ್ದಾಪುರ, ನ. ೨೮: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರವು ಈಡೇರಿಸದಿದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಹೋರಾಟ ಮಾಡಲಾಗುವುದೆಂದು ಗ್ರಾ.ಪಂ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಿದ್ದಾಪುರದ ಸಹಕಾರ ಸಂಘದ ಸಭಾಂಗಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗ್ರಾ.ಪಂ.ಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಬೇಡಿಕೆಗಳನ್ನು ಈಡೇರಿಸುವುದಾಗಿ ರಾಜ್ಯ ಸರ್ಕಾರವು ಭರವಸೆ ನೀಡಿತ್ತು. ಆದರೆ ಈವರೆಗೂ ಪಂಚಾಯಿತಿ ನೌಕರರಿಗೆ ಮಾಸಿಕ ವೇತನವನ್ನು ಸಮರ್ಪಕವಾಗಿ ನೀಡದೇ ವಿಳಂಬವಾಗಿ ವೇತನವನ್ನು ನೀಡುತ್ತಿದೆ ಎಂದು ಆರೋಪಿಸಿದರು.
ಅಲ್ಲದೇ ಕನಿಷ್ಟ ವೇತನವನ್ನು ಕೂಡ ಸರ್ಕಾರವು ನೌಕರರಿಗೆ ನೀಡದೇ, ನೀಡುತ್ತಿರುವ ವೇತನದಲ್ಲಿ ಕೂಡ ಶೇ. ೩೮ ರಷ್ಟು ಕಡಿತಗೊಳಿಸುತ್ತಿರುವುದು ಸರಿಯದ ಕ್ರಮವಲ್ಲ, ನೌಕರರಿಗೆ ನಿವೃತ್ತಿ ವೇತನ ಉಪಧನ ನೀಡದೇ ಮುಂಬಡ್ತಿಯನ್ನು ಕೂಡ ನೀಡುತ್ತಿಲ್ಲ ಎಂದು ದೂರಿದರು. ಇದಲ್ಲದೇ ಅನುಕಂಪದ ಆಧಾರದಲ್ಲಿ ಹುದ್ದೆಯನ್ನು ನೀಡಲು ಪಕ್ಷಪಾತ ಮಾಡುತ್ತಿದ್ದು, ಗ್ರಾ.ಪಂ. ನೌಕರರಿಗೆ ಮಾಸಿಕ ವೇತನವನ್ನು ಹೆಚ್ಚಿಗೆ ನೀಡಬೇಕೆಂದು ಒತ್ತಾಯಿಸಿದರು.
ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಗ್ರಾ.ಪಂ. ನೌಕರರ ಸಂಘಟನೆ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆಯನ್ನು ನಡೆಸಲಾಗುವುದೆಂದು ರಾಮಕೃಷ್ಣ ಎಚ್ಚರಿಕೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಬಿ. ನವೀನ್, ಉಪಾಧ್ಯಕ್ಷರು ಗಳಾದ ದಿಲೀಪ್, ಮಹದೇವ್ ಹಾಗೂ ಪದಾಧಿಕಾರಿಗಳಾದ ಎಂ.ಆರ್. ಸತೀಶ್, ಸಂಜ, ಜಾನಕಿ, ಶ್ರೇಯಸ್ ಹಾಜರಿದ್ದರು.