ಗೋಣಿಕೊಪ್ಪಲು, ನ.೨೮: ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಅನೇಕ ಮಂದಿ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಲ್ಲಿ ಬಹುತೇಕ ಮಂದಿ ಹೆಲ್ಮೆಟ್ ಧರಿಸದೆ ವಾಹನ ಓಡಿಸುವ ಸವಾರರೇ ಹೆಚ್ಚಾಗಿದ್ದಾರೆ. ಹೀಗಾಗಿ ತಮ್ಮ ಜೀವ ರಕ್ಷಣೆಗಾಗಿ ದ್ವಿಚಕ್ರ ವಾಹನ ಸವಾರರು ಸ್ವಯಂ ಪ್ರೇರಿತರಾಗಿ ಹೆಲ್ಮೆಟ್ ಧರಿಸಿ ತಮ್ಮ ವಾಹನಗಳನ್ನು ಚಲಾಯಿಸುವಂತೆ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸುಬ್ಬಯ್ಯ ಕರೆ ನೀಡಿದರು.
ನಗರದ ಬಸ್ ನಿಲ್ದಾಣದಲ್ಲಿ ಮೈಸೂರಿನ ಸುರಕ್ಷ ಟ್ರಸ್ಟ್ನ ಡಾ.ರಾಮ್ ಹಾಗೂ ಸಂಗಡಿಗರು, ವೀರಾಜಪೇಟೆ ರೋಟರಿ ಕ್ಲಬ್, ವಿವೇಕನಂದಾ ಯೂತ್ ಮೂಮೆಂಟ್, ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜು, ಮೆಡಿಕಲ್ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಧರಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ದ್ವಿಚಕ್ರ ವಾಹನದಿಂದ ಅಪಘಾತಕ್ಕೀಡಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮೃತ ಪಡುತ್ತಿದ್ದಾರೆ. ಸಾವಿರಾರು ಮಂದಿ ಅಂಗ ವೈಫಲ್ಯದಿಂದ ಜೀವನ ಪರ್ಯಂತ ಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಆಯಾ ಕುಟುಂಬಗಳು ನೋವು ಅನುಭವಿಸುತ್ತಿದೆ. ಇಂತಹ ಅನಾಹುತದಿಂದ ಹೊರ ಬರಲು ವಾಹನ ಸವಾರರುತಮ್ಮ ದ್ವಿಚಕ್ರ ವಾಹನದೊಂದಿಗೆ ಮನೆಯಿಂದ ಹೊರಡುವ ವೇಳೆ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸುವ ವಿಷಯದಲ್ಲಿ ಹಿಂಜರಿಕೆ ಇರಬಾರದು ಕೇವಲ ಪೊಲೀಸರಿಗೆ ಹೆದರಿ ವಾಹನ ಸವಾರರು ಹೆಲ್ಮೆಟ್ ಧರಿಸುವಂತಾಗ ಬಾರದು. ತಮ್ಮ ಸುರಕ್ಷತೆ ಹಾಗೂ ಕುಟುಂಬ ಸದಸ್ಯರ ಒಳಿತಿಗಾಗಿ ಈ ಜೀವ ರಕ್ಷಕ ಕವಚವನ್ನು ಧರಿಸುವಂತೆ ತಿಳಿಸಿದರು.
ವಿವೇಕಾನಂದ ಯೂತ್ ಮೂಮೆಂಟ್‌ನ ಪ್ರಮುಖ ಡಾ.ಚಂದ್ರಶೇಖರ್ ಮಾತನಾಡಿ ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಜವಾಬ್ದಾರಿಯಾಗಬೇಕು ಹಾಗೂ ಇದರ ಮೇಲೆ ನಂಬಿಕೆ ಇಡಬೇಕು. ಇತ್ತೀಚೆಗೆ ಆರ್ಥಿಕ ಪರಿಸ್ಥಿತಿಯಿಂದಾಗಿ ದ್ವಿಚಕ್ರ ವಾಹನವನ್ನು ಖರೀದಿಸಿ ಓಡಾಟ ನಡೆಸುತ್ತಿರುವುದು ಹೆಚ್ಚಾಗಿದೆ. ಸಣ್ಣ ಪುಟ್ಟ ಸ್ಥಳಗಳಿಗೆ ಹೋಗಿ ಬರಲು ದ್ವಿಚಕ್ರವನ್ನು ಬಳಸುತ್ತಿದ್ದಾರೆ. ಆದರೆ ಹೆಲ್ಮೆಟ್‌ಅನ್ನು ಧರಿಸದೆ ಓಡಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಸಾವು ನೋವುಗಳು ಕಂಡು ಬರುತ್ತಿವೆ. ಹೀಗಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಸಂಘ ಸಂಸ್ಥೆಗಳು ೨೦೧೮ರಿಂದ ರಾಜ್ಯಾದಾದ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ.
ಸುರಕ್ಷ ಟ್ರಸ್ಟ್, ವೀರಾಜಪೇಟೆ ರೋಟರಿ ಕ್ಲಬ್,ವಿವೇಕ ನಂದಾ ಯೂತ್ ಮೂಮೆಂಟ್, ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿವೆ. ರಸ್ತೆಯ ಸುರಕ್ಷತೆ ಹಾಗೂ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವಲ್ಲಿ ವಹಿಸುವ ಪ್ರಮುಖ ಪಾತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ೭೫ ಬೈಕ್ ಸವಾರರು ಹಾಗೂ ೧೦ ವಿಂಟೇಜ್ ಕಾರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ ಎಂದರು.
ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಜಿತೇಶ್ ಮಾತನಾಡಿ ಮಹಾಮಾರಿ ಕೊರೊನಾದಿಂದ ಕಳೆದ ಅವಧಿಯಲ್ಲಿ ಕರ್ನಾಟಕದಲ್ಲಿ ೪೦ ಸಾವಿರ ಮಂದಿ ಮೃತಪಟ್ಟಿದ್ದಾರೆ. ಇದು ಒಂದೆಡೆಯಾದರೆ ಪ್ರತಿ ವರ್ಷ ದ್ವಿಚಕ್ರ ವಾಹನದಿಂದ ಅಪಘಾತಕ್ಕೀಡಾಗಿ ಸಾವನಪ್ಪುವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗುತ್ತಿದೆ. ಅಪಘಾತ ಸಂಭವಿಸಿದ ಸಂದರ್ಭ ಮುಖದ ಭಾಗಕ್ಕೆ ಹೆಚ್ಚಿನ ಪೆಟ್ಟಾಗುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ತಮ್ಮ ರಕ್ಷಣೆಗಾಗಿ ಹೆಲ್ಮೆಟ್‌ಅನ್ನು ಬಳಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುರಕ್ಷ ಟ್ರಸ್ಟ್ನ ಡಾ.ರಾಮ್, ವೀರಾಜಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಲವೀನ್ ಚಂಗಪ್ಪ, ಕಾರ್ಯದರ್ಶಿ ಭರತ್, ವಲಯ ಸೇನಾನಿ ಆದಿತ್ಯ, ಬನ್ಸಿ, ಪೂವಣ್ಣ, ಭಾರ್ಗವಿ, ಗೋಣಿಕೊಪ್ಪ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಕಾಡ್ಯಮಾಡ ನೆವಿನ್, ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ಡಾ.ರಾಧಿಕ, ಡಾ.ಶಾಂತಲ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಹನ ಅಪಘಾತದ ವಿಷಯವಾಗಿ ನಾಟಕ ಪ್ರದರ್ಶನ ನಡೆಯಿತು.