ಕೂಡಿಗೆ, ನ.೨೮ : ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳು ಹಾಗೂ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಹೇಳಿದರು.

ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಂಜಲಿ ಕಾರ್ಯಕ್ರಮದ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳು ಹಾಗೂ ಸಮುದಾಯದ ಸಹಭಾಗಿತ್ವದಿಂದ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ಮಕ್ಕಳು, ಪಾಲಕರು ಹಾಗೂ ಶಿಕ್ಷಕರ ಸಮ್ಮಿಲನದ ಕೆಲಸದಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ. ಶಾಲಾ ಶಿಕ್ಷಕರು ಸ್ಥಳೀಯ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಶಾಲೆಯ ಪ್ರಗತಿಗೆ ಶ್ರಮಿಸಬೇಕು ಎಂದು ಪಾಂಡು ಹೇಳಿದರು.

ಇದೇ ವೇಳೆಯಲ್ಲಿ ವಿದ್ಯಾಂಜಲಿ ಕಾರ್ಯಕ್ರಮದಡಿ ದಾನಿ, ಸಂಪಾಜೆ ಹೋಬಳಿ ಕಂದಾಯಾಧಿಕಾರಿ ಬಿ.ಜಿ.ವೆಂಕಟೇಶ್ ಅವರು ಶಾಲಾ ಮುಖ್ಯೋಪಾಧ್ಯಾಯರ ಕಛೇರಿಗೆ ನೀಡಿದ ಕುರ್ಚಿ ಹಾಗೂ ಗೋಡೆಗೆ ಬಣ್ಣ ಹಾಕಲು ಬಣ್ಣ ಹಸ್ತಾಂತರಿಸಿದರು.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎ. ಬೋಜಮ್ಮ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಶಿಕ್ಷಕರಾದ ಡಿ.ವಿ.ಗಣೇಶ್, ಗೀತಾರಾಣಿ, ಎನ್.ಎನ್.ಭಾರತಿ, ಟಿ.ಆರ್. ಉಷಾ, ಎಸ್.ಆರ್.ಶಿವಲಿಂಗ ಇದ್ದರು.