ಮಡಿಕೇರಿ, ನ. ೨೭: ನಾಪೋಕ್ಲು ಹೋಬಳಿ ಕೈಕಾಡು ಗ್ರಾಮದ ಕಕ್ಕಬ್ಬೆ ಹೊಳೆಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದವರನ್ನು ಡಿಸಿಐಬಿ ಪೊಲೀಸರು ಪತ್ತೆಹಚ್ಚಿದ್ದಾರೆ.

ತಾ. ೨೬ರಂದು ಮಾಹಿತಿ ಮೇರೆ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕೈಕಾಡು ಗ್ರಾಮದ ರಮೇಶ್ ಎಂಬವರ ತೋಟದ ಸಮೀಪದ ಕಕ್ಕಬ್ಬೆ ಹೊಳೆಯಿಂದ ಅನಧಿಕೃತವಾಗಿ ಮರಳು ತೆಗೆಯುತ್ತಿದ್ದ ಸಂದರ್ಭ ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದು, ಸ್ಥಳದಲ್ಲಿ ದೊರೆತ ಸುಮಾರು ಎರಡು ಟಿಪ್ಪರ್ ಲಾರಿಗಳಷ್ಟು ಮರಳು ಹಾಗೂ ಮರಳು ತೆಗೆಯಲು ಬಳಸುವ ಕಬ್ಬಿಣದ ತೆಪ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಮರಳುಗಾರಿಕೆ ನಡೆಸುತ್ತಿದ್ದವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ ಹಾಗೂ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಹಾಗೂ ಅಪರಾಧ ಗುಪ್ತಚರದಳದ ಪೊಲೀಸ್ ನಿರೀಕ್ಷಕ ಐ.ಪಿ. ಮೇದಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ಅನಿಲ್ ಕುಮಾರ್, ಯೋಗೇಶ್, ಕುಮಾರ್, ನಿರಂಜನ್, ವಸಂತ, ಶರತ್ ರೈ ಹಾಗೂ ಚಾಲಕ ಶಶಿಕುಮಾರ್ ಭಾಗವಹಿಸಿದ್ದರು.