*ವೀರಾಜಪೇಟೆ, ನ. ೨೭: ವಂಚನೆ ಪ್ರಕರಣದಲ್ಲಿ ಕೇರಳ ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ವೀರಾಜಪೇಟೆಯಲ್ಲಿ ನಡೆದಿದೆ.

ಮೂಲತಃ ಕಣ್ಣಾನೂರು ನಿವಾಸಿ, ವೀರಾಜಪೇಟೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಉಮ್ಮರ್ ಕುಟ್ಟಿಯನ್ನು ಕೇರಳ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ಕೇರಳದಲ್ಲಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಉಮ್ಮರ್ ಕುಟ್ಟಿ ಪತ್ತೆಗೆ ಕೇರಳ ಪೊಲೀಸರು ಬಲೆ ಬೀಸಿದ್ದರು. ಆರೋಪಿ ಹಲವು ವರ್ಷಗಳಿಂದ ಪೊಲೀಸರಿಗೆ ಸುಳಿವು ನೀಡದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ವೀರಾಜಪೇಟೆಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಆತನ ಬಂಧನಕ್ಕಾಗಿ ವೀರಾಜಪೇಟೆಗೆ ಕೇರಳ ಪೊಲೀಸರು ಆಗಮಿಸಿ ಆರೋಪಿ ಸಂಚರಿಸುತ್ತಿದ್ದ ಕಾರನ್ನು ಹಿಂಬಾಲಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವೀರಾಜಪೇಟೆ-ಗೋಣಿಕೊಪ್ಪ ಮುಖ್ಯರಸ್ತೆಯಲ್ಲಿ ತಮ್ಮ ಇನ್ನೋವಾ ಕಾರಿನಲ್ಲಿ (ಕೆ.ಎಲ್. ೧೩-೯೮೯೯) ಉಮ್ಮರ್ ಕುಟ್ಟಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಪೊಲೀಸರು ತಡೆಯಲು ಮುಂದಾದಾಗ ಆರೋಪಿ ವಾಹನ ನಿಲ್ಲಿಸದೆ ವೇಗವಾಗಿ ಕಾರನ್ನು ಚಲಾಯಿಸಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಕಲ್ಲಿನಿಂದ ಉಮ್ಮರ್ ಕುಟ್ಟಿಯ ಕಾರಿನ ಗಾಜಿಗೆ ಹೊಡೆದಿದ್ದಾರೆ. ಪರಿಣಾಮ ಎದುರಿನಲ್ಲಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿದೆ. ಉಮ್ಮರ್ ಕುಟ್ಟಿ ಕಾರು ನಿಲ್ಲಿಸಿದ ಬಳಿಕ ಕಾರಿನ ಗಾಜು ಪೂರ್ತಿಯಾಗಿ ಒಡೆದು ಕಾರಿನಿಂದ ಹೊರಕ್ಕೆ ಉಮ್ಮರ್ ಕುಟ್ಟಿಯನ್ನು ಎಳೆದು ಬಂಧಿಸಿದ್ದಾರೆ.

ಈ ಕುರಿತು ವೀರಾಜಪೇಟೆ ನಗರಠಾಣೆಯಲ್ಲಿ ಆರೋಪಿ ಉಮ್ಮರ್ ಕುಟ್ಟಿಯೂ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿದ ಕಾರಣ ಎದುರಿಗಿದ್ದ ವಾಹನಕ್ಕೆ ಡಿಕ್ಕಿ ಪಡಿಸಲಾಗಿದೆ ಎಂದು ಕೇರಳ ಪೊಲೀಸರು ದೂರು ನೀಡಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದಲ್ಲಿ ವಂಚನೆ ಪ್ರಕರಣ - ವೀರಾಜಪೇಟೆಯಲ್ಲಿ ಆರೋಪಿಯ ಬಂಧನ

ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ