ಸಿದ್ದಾಪುರ, ನ. ೨೭: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಮಾಲ್ದಾರೆ ವ್ಯಾಪ್ತಿಯಲ್ಲಿ ಇದೀಗ ಹುಲಿಯೊಂದು ಪ್ರತ್ಯಕ್ಷಗೊಂಡಿದ್ದು, ಆತಂಕ ಮನೆ ಮಾಡಿದೆ. ಮಾಲ್ದಾರೆ ಸಮೀಪದ ಬಾಡಗಬಾಣಂಗಾಲ ಗ್ರಾಮದ ಮಾರ್ಗೊಳ್ಳಿ ಖಾಸಗಿ ಕಾಫಿ ತೋಟದಲ್ಲಿ ಕಾರ್ಮಿಕರು ತೋಟ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾಡಹಗಲೇ ಹುಲಿಯೊಂದು ಪ್ರತ್ಯಕ್ಷಗೊಂಡಿದೆ. ಹುಲಿಯನ್ನು ಕಂಡ ಕಾರ್ಮಿಕರು ಭಯಭೀತರಾಗಿದ್ದು, ಕೂಡಲೇ ಕೆಲಸ ಸ್ಥಗಿತಗೊಳಿಸಿ ಓಡಿದ್ದಾರೆ. ಸ್ಥಳೀಯ ಯುವಕರು ಹುಲಿ ಸಂಚರಿಸುತ್ತಿರುವ ವೀಡಿಯೋವನ್ನು ಚಿತ್ರೀಕರಿಸಲು ಮುಂದಾಗಿದ್ದು, ಹುಲಿಯು ಘರ್ಜಿಸುತ್ತಾ ತೋಟದ ಕಡೆ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಚೆನ್ನಂಗಿ ಗ್ರಾಮದ ದಿಡ್ಡಳ್ಳಿ, ಬಸವನಹಳ್ಳಿ ಹಾಗೂ ಮಾಲ್ದಾರೆ ಸಮೀಪದ ಕಾಫಿ ತೋಟವೊಂದರಲ್ಲಿ ಹುಲಿ ಪ್ರತ್ಯಕ್ಷಗೊಂಡಿತ್ತು. ಅಲ್ಲದೇ ಚೆನ್ನಂಗಿ ಗ್ರಾಮದಲ್ಲಿ ಹಲವಾರು ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆಯು ನಡೆದಿತ್ತು. ಆದರೂ ಕೂಡಾ ಅರಣ್ಯ ಇಲಾಖಾ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಲಿಯನ್ನು ಕೂಡಲೇ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ಇದಲ್ಲದೇ ಸಿದ್ದಾಪುರ, ಕರಡಿಗೋಡು ಭಾಗದಲ್ಲಿ ಕಾಡಾನೆಗಳ ಹಾವಳಿ ಕೂಡ ಇದ್ದು, ಇದೀಗ ಕಾಫಿ ಫಸಲುಗಳು ಹಣ್ಣಾಗಿದ್ದು, ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಕಾಫಿ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸರ್ಕಾರವು ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ವಾಸು ಎ.ಎನ್.