ಸೋಮವಾರಪೇಟೆ, ನ. ೨೭: ಹೂ ಮಳೆ-ಮುಂಗಾರು ಮಳೆಯಿಂದ ಕಾಫಿ ಗಿಡದ ತುಂಬೆಲ್ಲಾ ಹರಡಿಕೊಂಡಿದ್ದ ಅರೇಬಿಕಾ ಕಾಫಿ ಕಳೆದೆರಡು ತಿಂಗಳಿನಿAದ ಸತತವಾಗಿ ಸುರಿದ ಅಕಾಲಿಕ ಮಳೆಗೆ ಮಣ್ಣುಪಾಲಾಗಿದೆ. ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರ ಮೇಲೆ ವಾಯುಭಾರ ಕುಸಿತದ ಮೂಲಕ ವರುಣ ಅವಕೃಪೆ ತೋರಿದ್ದರ ಪರಿಣಾಮ ಅರೇಬಿಕಾ ಬೆಳೆಗಾರರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದಾರೆ.

ಅರೇಬಿಕಾವನ್ನು ಹೆಚ್ಚು ಬೆಳೆಯುವ ಉತ್ತರ ಕೊಡಗಿನಾದ್ಯಂತ ಈ ಬಾರಿ ಭಾರೀ ಪ್ರಮಾಣದ ಫಸಲು ನಷ್ಟ ಸಂಭವಿಸಿದ್ದು, ನಷ್ಟವನ್ನು ಅಂದಾಜಿಸುವುದೇ ಕಷ್ಟಸಾಧ್ಯವಾಗಿದೆ. ಕಾಫಿ ಫಸಲು ಗಿಡಗಳಲ್ಲಿ ಹಣ್ಣಾಗಿರುವ ಸಂದರ್ಭವೇ ಬಿಟ್ಟೂಬಿಡದೆ ಮಳೆ ಸುರಿದಿದ್ದರಿಂದ ವಾತಾವರಣದಲ್ಲಿ ಶೀತ ಹೆಚ್ಚಾಗಿ ಹಣ್ಣು ಕಾಫಿ ನೆಲಕ್ಕಚ್ಚಿವೆ. ಇದರೊಂದಿಗೆ ರೆಂಬೆಗಳಲ್ಲಿಯೇ ಕಾಫಿ ಕೊಳೆಯಲಾರಂಭಿಸಿದೆ.

ನೆಲಕ್ಕಚ್ಚಿದ ಹಣ್ಣು ಕಾಫಿಯನ್ನು ಸಂಗ್ರಹಿಸಲೂ ಸಹ ಮಳೆ ಬಿಡುವು ನೀಡದ ಹಿನ್ನೆಲೆ, ಕಾಫಿ ಗಿಡದ ಬುಡದಲ್ಲಿ ಬಿದ್ದ ಕಾಫಿ ಬೇಳೆ ಮೊಳಕೆಯೊಡೆದು ಮತ್ತೆ ಗಿಡಗಳಾಗುತ್ತಿವೆ. ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕಾಫಿ, ಈ ಬಾರಿ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿಸುವ ಬದಲು ಚಿಂತೆಯ ಗೆರೆಗಳನ್ನು ಎಳೆದಿದೆ.

ಪ್ರಸಕ್ತ ವರ್ಷ ಆರಂಭದಲ್ಲಿ ಉತ್ತಮವಾಗಿ ಮಳೆಯಾದ ಹಿನ್ನೆಲೆ ಗಿಡಗಳಲ್ಲಿ ಹೂವುಗಳರಲಿ ಸೆಟ್ ಆಗಿದ್ದವು. ತದನಂತರ ಎರಡು ಬಾರಿ ಮಳೆಯಾದ ಹಿನ್ನೆಲೆ ಮತ್ತೆ ಹೂವುಗಳು ಮೂಡಿದವು. ಹೀಗಾಗಿ ಪ್ರಸಕ್ತ ವರ್ಷ ಮೂರು ಬಾರಿ ಕಾಫಿ ಕೊಯ್ಲು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಕಾಲಿಕ ಮಳೆಯಿಂದಾಗಿ ಕಾಫಿ ಬೀಜ ಒಂದೇ ಬಾರಿಗೆ ಹಣ್ಣಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಇದೀಗ ಗಿಡಗಳಲ್ಲಿ ಇರುವ ಹಣ್ಣುಗಳನ್ನು ಹೆಕ್ಕುವ ಕಾರ್ಯ ನಡೆಯುತ್ತಿದ್ದು, ಮುಂದಿನ ತಿಂಗಳು ಮತ್ತೊಮ್ಮೆ ಹಣ್ಣುಗಳನ್ನು ಕೊಯ್ಲು ಮಾಡಬೇಕಿದೆ. ಈ ವರ್ಷ ಅವಧಿಗೂ ಮುನ್ನವೇ ಕಾಫಿ ಗಿಡಗಳಲ್ಲಿ ಹಣ್ಣುಗಳು ಕಂಡುಬAದಿದ್ದು, ಅದೇ ಸಮಯದಲ್ಲಿ ಮಳೆಯೂ ಪ್ರಾರಂಭವಾಗಿದ್ದರಿAದ ಭಾರೀ ಪ್ರಮಾಣದ ಫಸಲು ಮಣ್ಣುಪಾಲಾಗಿವೆ.

ಪ್ರಸ್ತುತ ಅರೇಬಿಕಾ ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಕಣ್ಣೆದುರಿದ್ದ ಕಾಫಿ ಫಸಲು ಮಣ್ಣು ಸೇರಿದೆ. ಅಳಿದುಳಿದ ಕಾಫಿಯನ್ನು ಕೊಯ್ಲುಮಾಡಿ ಪಲ್ಪಿಂಗ್ ಮಾಡಿಸಿದರೂ ಒಣಗಿಸಲು ಸಮಸ್ಯೆಯಾಗುತ್ತಿದೆ. ಪ್ರತಿದಿನ ಒಮ್ಮೆಯಾದರೂ ಮಳೆ ಸರಿಯುತ್ತಿದ್ದು, ಬಿಸಿಲಿನ ತಾಪಕ್ಕಿಂತ ಮೋಡದ ನೆರಳೇ ಅಧಿಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಫಿಯನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಒಣಗದ ಕಾಫಿಯನ್ನು ಹಾಗೆಯೇ ತುಂಬಿಸಿಟ್ಟರೆ ಗುಣಮಟ್ಟವೂ ಇರುವುದಿಲ್ಲ. ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇಲ್ಲವಾಗುತ್ತದೆ ಎಂದು ಕಾಫಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಕೆಲವು ಬೆಳೆಗಾರರು ಏಲಕ್ಕಿಯನ್ನು ಒಣಗಿಸಲು ಬಳಸುತ್ತಿದ್ದ ಗೂಡನ್ನು ಇದೀಗ ಕಾಫಿ ಒಣಗಿಸಲು ಬಳಸುತ್ತಿದ್ದಾರೆ. ಆದರೆ ಒಮ್ಮೆಗೆ ಹೆಚ್ಚು ಕಾಫಿಯನ್ನು ಒಣಗಿಸಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿದ್ದಾರೆ.

ಭತ್ತದ ಬೆಳೆಗೂ ಕಂಟಕ: ಇದರೊಂದಿಗೆ ಭತ್ತದ ಕಣಜ ಎಂದು ಕರೆಸಿಕೊಂಡಿದ್ದ ತಾಲ್ಲಕಿನ ಭತ್ತ ಬೆಳೆಗಾರರು, ಅಕಾಲಿಕ ಮಳೆಯಿಂದಾಗಿ ನಷ್ಟದ ಭೀತಿಯಲ್ಲಿದ್ದಾರೆ. ಕೆಲವೆಡೆಗಳಲ್ಲಿ ಈಗ ಭತ್ತದ ಕಾಳು ಕಟ್ಟುತ್ತಿದ್ದರೆ, ಕೆಲವು ಪ್ರದೇಶದಲ್ಲಿ ಭತ್ತ ಕೊಯ್ಲಿಗೆ ಬಂದಿದ್ದು, ಮಳೆ ಬೀಳುತ್ತಿರುವುದರಿಂದ ಪೈರು ಮುರಿದು ಬೀಳುತ್ತಿದೆ. ಬಿದ್ದ ಪೈರಿನ

(ಮೊದಲ ಪುಟದಿಂದ) ಭತ್ತ ಕಾಳು ನೀರು ಸೇರಿ ಮೊಳಕೆ ಬರುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭಾರಿ ಮುಂಗಾರು ಮಳೆ ಪ್ರಾರಂಭವಾದಾಗಿನಿAದಲೂ ನಿರಂತರವಾಗಿ ಮಳೆಯಾದರೆ, ಇದೀಗ ಅಕಾಲಿಕ ಮಳೆ ಸುರಿಯುತ್ತಿದೆ. ಭತ್ತ ಕೃಷಿಯಿಂದ ನಷ್ಟವೇ ಜಾಸ್ತಿ ಎಂದು ಜಿಲ್ಲೆಯಲ್ಲಿ ಸಾಕಷ್ಟು ರೈತರು ಭತ್ತದ ಕೃಷಿಯಿಂದ ಹಿಮ್ಮುಖರಾಗಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಕೃಷಿಕರು ನಷ್ಟವಾದರೂ ಭತ್ತ ಬೆಳೆಯುತ್ತಿದ್ದಾರೆ. ಆದರೆ, ಅಕಾಲಿಕ ಮಳೆ ರೈತರ ನೆಮ್ಮದಿ ಕಸಿದುಕೊಂಡಿದೆ.

ಅತೀ ಹೆಚ್ಚು ಮಳೆಬೀಳುವ ಶಾಂತಳ್ಳಿ ಹೋಬಳಿಯ ಹೆಗ್ಗಡಮನೆ, ಬೀದಳ್ಳಿ, ಮಲ್ಲಳ್ಳಿ, ಕುಮಾರಳ್ಳಿ, ಕುಂದಳ್ಳಿ, ಕೊತ್ತನಳ್ಳಿ, ಬೆಟ್ಟದಕೊಪ್ಪ, ಹರಗ, ಕೂತಿ, ಯಡೂರು, ತೋಳೂರುಶೆಟ್ಟಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು ಇತ್ಯಾದಿ ಗ್ರಾಮಗಳಲ್ಲಿ ಜೀವನೋಪಾಯಕ್ಕಾಗಿ ಭತ್ತವನ್ನು ಬೆಳೆದಿದ್ದಾರೆ. ಮುಂಗಾರಿನಲ್ಲಿ ಸುರಿದ ಹೆಚ್ಚಿನ ಮಳೆಯಿಂದ ಅಲ್ಪಸ್ವಲ್ಪ ಇದ್ದ ಕಾಫಿ, ಕಾಳುಮೆಣಸು ಫಸಲನ್ನು ಕಳೆದುಕೊಂಡಿದ್ದರು. ಈಗ ಭತ್ತವೂ ಕೈಸೇರುವ ನಂಬಿಕೆ ಇಲ್ಲವಾಗಿದೆ. ಕೊಡ್ಲಿಪೇಟೆ, ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ ಹೋಬಳಿಯ ಗ್ರಾಮಗಳಲ್ಲಿ ಭತ್ತ ಕೊಯ್ಲಿಗೆ ಬಂದಿದೆ. ಗರ್ವಾಲೆ ಗ್ರಾಮ ಪಂಚಾಯಿತಿಯ ಗರ್ವಾಲೆ, ಮೂವತ್ತೊಕ್ಕಲು, ಕುಂಬಾರಗಡಿಗೆ, ಸೂರ್ಲಬ್ಬಿ, ಮಂಕ್ಯಾ, ಕಿಕ್ಕರಳ್ಳಿ ವ್ಯಾಪ್ತಿಯ ಗದ್ದೆಗಳಲ್ಲಿ ಯಥೇಚ್ಛ ನೀರು ಸಂಗ್ರಹವಾಗಿದ್ದು, ಭತ್ತದ ಬೆಳೆಗೆ ಪ್ರತಿಕೂಲ ಪರಿಸ್ಥಿತಿ ನಿರ್ಮಿಸಿದೆ.

ತಾಲೂಕಿನಲ್ಲಿ ಹಲವಷ್ಟು ರೈತರು ಬಿಆರ್ ತಳಿಯ ಭತ್ತ ಬೆಳೆದಿದ್ದಾರೆ. ಆರು ತಿಂಗಳ ತಳಿಯನ್ನು ಗದ್ದೆಯಲ್ಲಿ ನಾಟಿ ಮಾಡಿದ್ದು, ಈಗಾಗಲೇ ಪೈರು ಎತ್ತರಕ್ಕೆ ಬೆಳೆದಿದೆ. ಉತ್ತಮವಾಗಿ ಕಾಳು ಕಟ್ಟಿದೆ. ಆದರೆ, ಈಗಿನ ಅಕಾಲಿಕ ಮಳೆಯಿಂದಾಗಿ ಭತ್ತದ ಪೈರು ಗದ್ದೆಯಲ್ಲಿ ಬಿದ್ದುಹೋಗಿದೆ. ಇದರಿಂದ ಶೇ. ೨೦ ರಷ್ಟು ಫಸಲು ಕೈಸೇರುವುದು ಕಷ್ಟ. ಈಗಾಗಲೇ ನೀರಿನಲ್ಲಿ ಭತ್ತದ ತೆನೆ ಮುಳುಗಿರುವುದರಿಂದ ಉದುರಿ ಹೋಗುತ್ತದೆ. ಭತ್ತದ ಬೆಳೆಗಾರರು ನಿರಂತರವಾಗಿ ನಷ್ಟಕ್ಕೊಳಗಾಗುವುದು ಮುಂದುವರೆದಿದೆ. ಸರ್ಕಾರ ಭತ್ತದ ಕೃಷಿಕರ ಹಿತ ಕಾಯುವ ಕೆಲಸ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ತಾಲೂಕಿನ ೧೦ಸಾವಿರ ಹೆಕ್ಟೇರ್ ಭತ್ತ ಭೂಮಿಯಲ್ಲಿ ೮೫೦೦ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ೨೦೦೦ ಹೆಕ್ಟೇರ್‌ನಲ್ಲಿ ಈಗಾಗಲೆ ಕೊಯ್ಲಿಗೆ ಬಂದಿದೆ. ಎರಡು ವಾರದೊಳಗೆ ಶೇ.೯೦ ರಷ್ಟು ಭತ್ತ ಕೊಯ್ಲಿಗೆ ಬರಲಿದೆ. ಮಳೆ ನಿಲ್ಲುವುದನ್ನೇ ರೈತರು ಕಾಯುತ್ತಿದ್ದಾರೆ.

ಕಾಳು ಕಟ್ಟುವ ಸಂದರ್ಭದಲ್ಲಿ ಮಳೆ ಬೀಳುತ್ತಿರುವುದರಿಂದ ಫಸಲು ನಷ್ಟವಾಗುತ್ತದೆ. ಬಿಸಿಲು ಬಂದ ಮೇಲೆ ಬೆಳೆ ಕಟಾವು ಮಾಡಿ, ಚೆನ್ನಾಗಿ ಒಣಗಿಸಿ ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಭತ್ತದಲ್ಲಿ ತೇವಾಂಶ ಜಾಸ್ತಿಯಿದ್ದರೆ ಗುಣಮಟ್ಟ ಕಳೆದುಕೊಂಡು ಬೆಲೆ ಸಿಗುವುದಿಲ್ಲ. ಈವರೆಗೆ ತಾಲೂಕಿನಲ್ಲಿ ಭತ್ತಕ್ಕೆ ಯಾವುದೇ ರೋಗಬಾಧೆ ಕಾಣಿಸಿಕೊಂಡಿಲ್ಲ. ಆದರೂ ರೈತರು ಬೆಳೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ಸಮಸ್ಯೆಯಿದ್ದಲ್ಲಿ ಕೃಷಿ ಇಲಾಖೆಯನ್ನು ಸಂಪರ್ಕಿಸಿ, ಮಾಹಿತಿ ಪಡೆಯಬೇಕೆಂದು ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಮನವಿ ಮಾಡಿದ್ದಾರೆ.

ಕರಿಮೆಣಸಿಗೂ ಆತಂಕ: ತಾಲೂಕಿನ ಕಾಫಿ ತೋಟಗಳಲ್ಲಿ ಕರಿಮೆಣಸು ಬೆಳೆಯಲಾಗುತ್ತಿದ್ದು, ಅಕಾಲಿಕ ಮಳೆಯಿಂದಾಗಿ ಮೆಣಸಿನ ಫಸಲು ನಷ್ಟವಾಗುತ್ತಿದೆ. ಉತ್ತಮವಾಗಿ ಚಿಗುರು ಬಂದು ಗೆರೆಗಳೂ ಮೂಡಿದ್ದರಿಂದ ಈ ಬಾರಿ ಬಂಪರ್ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರಿದ್ದರು. ಆದರೆ ಅಕಾಲಿಕ ಮಳೆ ಇವರ ಆಸೆಗೆ ತಣ್ಣೀರೆರೆಚಿದ್ದು, ಕಾಳುಗಳು ಮೂಡಿದ್ದ ಕರಿಮೆಣಸು ಗೆರೆಗಳು ನೆಲಕ್ಕಚ್ಚಿ ನಷ್ಟ ಸಂಭವಿಸಿದೆ.

ಮAಕಾದ ಮುಸುಕಿನ ಜೋಳ: ವನ್ಯಪ್ರಾಣಿಗಳ ಹಾವಳಿ ನಡುವೆಯೂ ಉಳಿಸಿಕೊಂಡು ಬಂದಿದ್ದ ಮುಸುಕಿನ ಜೋಳ ಅಕಾಲಿಕ ಮಳೆಗೆ ಸಿಲುಕಿ ತತ್ತರಿಸಿದೆ. ಅರೆ ಮಲೆನಾಡು ಪ್ರದೇಶಗಳಾದ ಗಣಗೂರು, ಆಲೂರುಸಿದ್ದಾಪುರ, ಬಾಣಾವರ, ನೇರುಗಳಲೆ, ಸಂಗಯ್ಯನಪುರ, ಗೋಣಿಮರೂರು, ಭುವಂಗಾಲ, ಕಣಗಾಲು, ಅಂಕನಳ್ಳಿ, ನಾಗವಾಲ, ಉಂಚಿಗನಹಳ್ಳಿ, ಬಡುಬನಹಳ್ಳಿ, ಹೊಸಗುತ್ತಿ, ಮಾಲಂಬಿ, ಯಲಕನೂರು, ಮದಲಾಪುರ, ಹೊಸಳ್ಳಿ ಗ್ರಾಮಗಳೂ ಸೇರಿದಂತೆ ಕುಶಾಲನಗರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮುಸುಕಿನ ಜೋಳದ ಬೆಳೆ ಹಾನಿಗೊಳಗಾಗಿದೆ. ಅಕ್ಟೋಬರ್, ನವೆಂಬರ್‌ನಲ್ಲಿ ಜೋಳದ ಬೆಳೆ ಕಟಾವಿಗೆ ಬಂದಿದ್ದು, ಇದೇ ಸಂದರ್ಭ ಅಕಾಲಿಕ ಮಳೆಯಾದ್ದರಿಂದ ಫಸಲು ಕಟಾವು ಮಾಡಲು ಸಾಧ್ಯವಾಗಿಲ್ಲ. ಪರಿಣಾಮ ಜೋಳ ಗಿಡದಲ್ಲೇ ಮೊಳಕೆಯೊಡೆಯುತ್ತಿದ್ದು, ಪ್ರಯೋಜನಕ್ಕೆ ಬಾರದಂತಾಗಿದೆ.

ಈ ವ್ಯಾಪ್ತಿಯ ೧೮೦೦ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದೆ. ಅಕಾಲಿಕ ಮಳೆಯಿಂದ ೧೫೦ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳಕ್ಕೆ ಹಾನಿಯಾಗಿದೆ. ರೈತರ ಕೋರಿಕೆ ಹಿನ್ನೆಲೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಬಾನು, ಸಹಾಯಕ ನಿರ್ದೇಶಕ ಯಾದವ್ ಬಾಬು ಅವರುಗಳು ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದು, ಪರಿಹಾರ ಒದಗಿಸುವ ಸಂಬAಧ ವರದಿ ಸಲ್ಲಿಸಿದ್ದಾರೆ.ಒಟ್ಟಾರೆ ತಾಲೂಕಿನಾದ್ಯಂತ ಕಾಫಿ, ಕರಿಮೆಣಸು, ಮುಸುಕಿನ ಜೋಳ, ಭತ್ತ ಸೇರಿದಂತೆ ಇನ್ನಿತರ ತರಕಾರಿ ಬೆಳೆಗಳು ಅಕಾಲಿಕ ಮಳೆಗೆ ಸಿಲುಕಿ ಹಾನಿಗೀಡಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂಬ ಒತ್ತಾಯ ಕೃಷಿಕರಿಂದ ಕೇಳಿಬಂದಿದೆ.

- ವಿಜಯ್ ಹಾನಗಲ್