ಮಡಿಕೇರಿ ನ.೨೬ : ೨೦೧೮ ರಲ್ಲಿ ನಡೆದ ಕುಲ್ಲೇಟಿರ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಮೊದಲ ಕಂತಿನಲ್ಲಿ ೨೫ ಲಕ್ಷ ರೂ.ಗಳನ್ನು ಸರಕಾರದ ಮೂಲಕ ಬಿಡುಗಡೆಗೊಳಿಸಲು ಸಹಕರಿಸಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ಎಂ.ಟಿ.ನಾಣಯ್ಯ ಅವರನ್ನು ಕುಲ್ಲೇಟಿರ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.

ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗೂ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನ ನಿವಾಸದಲ್ಲಿ ನಾಣಯ್ಯರನ್ನು ಭೇಟಿ ಮಾಡಿದ ಕುಲ್ಲೇಟಿರ ಕುಟುಂಬದ ಪ್ರಮುಖರು ಅನುದಾನ ಬಿಡುಗಡೆಗೆ ಸಹಕಾರ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿದರು.

ಹಾಕಿ ಹಬ್ಬದ ಅನುದಾನದಲ್ಲಿ ರೂ.೧೫ ಲಕ್ಷ ಬಿಡುಗಡೆಗೆ ಬಾಕಿ ಇರುವ ಬಗ್ಗೆ ಗಮನ ಸೆಳೆದ ಪ್ರಮುಖರು, ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದರು. ಕ್ರೀಡಾ ಕ್ಷೇತ್ರದ ಬಗ್ಗೆ ಚರ್ಚಿಸಿದ ಅವರುಗಳು ಕ್ರೀಡಾಕಲಿಗಳ ನಾಡೆಂದು ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವ ವಿದ್ಯಾನಿಲಯವೊಂದನ್ನು ಸ್ಥಾಪಿಸಬೇಕು ಮತ್ತು ಪ್ರತಿವರ್ಷ ನಡೆಯುವ ಕೌಟುಂಬಿಕ ಕ್ರೀಡಾಕೂಟಕ್ಕೆ ಸರಕಾರ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ವಕೀಲ ಮಲ್ಲಂಗಡ ನೆಹರು, ಕುಲ್ಲೇಟಿರ ಹಾಕಿ ಹಬ್ಬದ ಕಾರ್ಯದರ್ಶಿ ಹಾಗೂ ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ಪೂಣಚ್ಚ ಬಾಬಾ, ತೇಲಪಂಡ ರಾಘವೇಂದ್ರ ನಾಣಯ್ಯ ಮತ್ತಿತರರು ಹಾಜರಿದ್ದರು.