ಮಡಿಕೇರಿ, ನ. ೨೬: ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಮೂಲಕ ರಾಜ್ಯ ವಿಧಾನ ಪರಿಷತ್‌ಗೆ ಪ್ರವೇಶಿಸುವ ಚುನಾವಣೆ ಇದಾಗಿದ್ದು, ತಳಮಟ್ಟದಲ್ಲಿ ಬರುವ ಈ ಸದಸ್ಯರ ಪರವಾಗಿ ದನಿ ಎತ್ತುವುದರೊಂದಿಗೆ ಗ್ರಾಮೀಣ ಅಭಿವೃದ್ಧಿಯತ್ತ ಗಮನ ಹರಿಸುವ ಚಿಂತನೆ ಹೊಂದಿರುವುದಾಗಿ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ಮಂಥರ್‌ಗೌಡ ಅವರು ಹೇಳಿದರು.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ಚುನಾಯಿತರಾಗುವ ಸದಸ್ಯರಿಗೆ ತಮ್ಮನ್ನು ಚುನಾಯಿಸಿದ ಜನತೆಗೆ ಸ್ಪಂದಿಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವಿದೆ. ಇವರು ಜನರಿಗೆ ಸ್ಪಂದಿಸಲು ಅಗತ್ಯ ಸವಲತ್ತು - ಯೋಜನೆಗಳು ಕೆಳ ಹಂತಕ್ಕೆ ನೇರವಾಗಿ ತಲುಪಬೇಕು. ತಾವು ಜಯಗಳಿಸಿದಲ್ಲಿ ಈ ವಿಷಯದ ಬಗ್ಗೆ ಗಮನ ಹರಿಸಿ ಕೆಲಸ ನಿರ್ವಹಿಸುವುದಾಗಿ ಅವರು ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ನೇರವಾಗಿ ಸಿಗುವವರು ಹೆಚ್ಚಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿರುತ್ತಾರೆ. ಆದರೆ ಅವರಿಗೆ ಅಗತ್ಯ ಯೋಜನೆಗಳು ತಲುಪದಿದ್ದರೆ ಅವರು ಜನತೆಗೆ ಸ್ಪಂದಿಸಲು ಸಾಧ್ಯವಾಗದು. ಇದರಿಂದಾಗಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರತಿನಿಧಿಗಳು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟ ಮಂಥರ್‌ಗೌಡ ಅವರು, ಈ ವಿಚಾರದಲ್ಲಿ ದನಿಎತ್ತುವ ಅಭಿಲಾಷೆ ತಮ್ಮದು ಎಂದರು.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಈ ಮೂರು ಸ್ಥಳೀಯ ಸಂಸ್ಥೆಗಳು ಒಂದಕ್ಕೊAದು ಪೂರಕವಾಗಿ ಹೊಂದಾಣಿಕೆ ಯಿಂದ ಕೆಲಸ ಮಾಡಬೇಕು. ಮೇಲ್ಮನೆ ಸದಸ್ಯರಾಗಿರುವವರು ಇದಕ್ಕೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿದ್ದು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ತಮ್ಮ ಗೆಲುವಿಗೆ ಸಹಕಾರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಹೇಳಿದ ಮಂಥರ್‌ಗೌಡ ತಾವು ಹೊರಗಿನವರು ಎಂಬ ಅಭಿಪ್ರಾಯ ಸರಿಯಲ್ಲ. ತಾವು ಇಲ್ಲಿಗೆ ಸಂಬAಧಿಸಿದವರೇ ಆಗಿದ್ದು, ತಮ್ಮ ಪತ್ನಿಯೂ ಜಿಲ್ಲೆಯವರೇ ಆಗಿದ್ದಾರೆ. ಜಿಲ್ಲೆಯ ಅನ್ನತಿಂದಿದ್ದು ಇಲ್ಲಿನ ಸೇವೆಗೂ ಅವಕಾಶ ಕೋರುತ್ತಿರುವುದಾಗಿ ನುಡಿದರು. ಎಲ್ಲದಕ್ಕೂ ಅವಕಾಶಗಳು ಕಡಿಮೆ ಇರುತ್ತವೆ. ಆದರೆ ಮಾಡುವ ಕೆಲಸ ಶಾಶ್ವತವಾಗಿ ಉಳಿಯುವಂತಿರಬೇಕು.
ಓರ್ವ ವೈದ್ಯರಾಗಿ ಗ್ರಾಮೀಣ ಮಟ್ಟದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವುದು, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಚಿಂತನೆ ತಮ್ಮದಾಗಿದೆ. ತಮ್ಮ ಗೆಲುವಿಗೆ ಪಕ್ಷದ ಎಲ್ಲರು ಒಂದಾಗಿ ಶ್ರಮ ವಹಿಸುತ್ತಿದ್ದಾರೆ ಎಂದರು. ಕೆಲವು ಚುನಾವಣೆಗಳಲ್ಲಿ ಗೆಲ್ಲುವವರು ಸೋಲುತ್ತಾರೆ. ಸೋಲುವವರು ಗೆಲ್ಲುತ್ತಾರೆ. ಇಂತಹ ಸಾಕಷ್ಟು ಉದಾಹರಣೆಗಳಿವೆ. ಪ್ರಸ್ತುತ ಬಿ.ಜೆ.ಪಿ. ಪ್ರತಿನಿಧಿಗಳೇ ಬದಲಾವಣೆ ಬಯಸುತ್ತಿದ್ದಾರೆ. ಇದೂ ತಮಗೆ ಪೂರಕವಾಗಲಿದೆ ಎಂದು ಅವರು ಮತದಾರರ ಸಂಖ್ಯೆಯ ಕುರಿತ ವಿಶ್ಲೇಷಣೆಗೆ ಪ್ರತಿಕ್ರಿಯಿಸಿದರು.