ಇಡಬ್ಲ್ಯೂಎಸ್ ಮೀಸಲಾತಿಗೆ ಆದಾಯ ಮಿತಿ ಮರುಪರಿಶೀಲನೆ

ನವದೆಹಲಿ, ನ. ೨೫: ನೀಟ್- ಸ್ನಾತಕೋತ್ತರ ವೈದ್ಯಕೀಯ ಪ್ರವೇಶಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರ (ಇಡಬ್ಲ್ಯೂಎಸ್) ಮೀಸಲಾತಿಗೆ ನಿಗದಿಪಡಿಸಿರುವ ೮ ಲಕ್ಷ ರೂಪಾಯಿ ವಾರ್ಷಿಕ ಆದಾಯದ ಮಾನದಂಡವನ್ನು ಮರು ಪರಿಶೀಲನೆ ಮಾಡುವುದಾಗಿ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್‌ನಾಥ್ ಅವರ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಮಾಹಿತಿ ನೀಡಿದ್ದು, ಇಡಬ್ಲ್ಯೂಎಸ್ ಮಾನದಂಡಗಳನ್ನು ನಿರ್ಧರಿಸಲು ಸಮಿತಿಯನ್ನು ರಚಿಸಲಾಗುವುದು. ಇದಕ್ಕೆ ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ. ಈ ಹಿಂದೆ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನೀಟ್ (ಪಿಜಿ) ಕೌನ್ಸಿಲಿಂಗ್ ಅನ್ನು ಇನ್ನೂ ನಾಲ್ಕು ವಾರಗಳ ಕಾಲ ಮುಂದೂಡಲಾಗುವುದು ಎಂದು ಮೆಹ್ತಾ ಅವರು ಸುಪ್ರೀಂಕೋರ್ಟ್ಗೆ ತಿಳಿಸಿದರು. ರಾಷ್ಟಿçÃಯ ಅರ್ಹತೆ ಮತ್ತು ಪ್ರವೇಶದಲ್ಲಿ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಶೇ. ೨೭ ಮತ್ತು ಇಡಬ್ಲ್ಯುಎಸ್ ವರ್ಗಕ್ಕೆ ಶೇ. ೧೦ ರ ಮೀಸಲಾತಿ ನೀಡುವ ಕೇಂದ್ರ ಮತ್ತು ವೈದ್ಯಕೀಯ ಕೌನ್ಸಿಲಿಂಗ್ ಸಮಿತಿ(ಎಂಸಿಸಿ)ಯ ಜುಲೈ ೨೯ ರಂದು ಹೊರಡಿಸಿದ್ದ ಸೂಚನೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಈ ವೇಳೆ ಇಡಬ್ಲ್ಯೂಎಸ್ ಕೋಟಾವು ಅತ್ಯಂತ ಸಕ್ರಿಯಗೊಳಿಸುವ ಮತ್ತು ಪ್ರಗತಿಪರ ರೀತಿಯ ಮೀಸಲಾತಿಯಾಗಿದೆ. ಕೇಂದ್ರ ಸರ್ಕಾರದ ಈ ಪ್ರಯತ್ನವನ್ನು ಎಲ್ಲಾ ರಾಜ್ಯಗಳು ಬೆಂಬಲಿಸಬೇಕು ಎಂದು ನ್ಯಾಯಮೂರ್ತಿ ಕಾಂತ್ ಅವರು ಹೇಳಿದರು.

ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕು ಹೆಚ್ಚಳ

ಧಾರವಾಡ, ನ. ೨೫: ಧಾರವಾಡ ಬಳಿಯಿರುವ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ೬೬ ವಿದ್ಯಾರ್ಥಿಗಳಲ್ಲಿ ಬುಧವಾರ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಕೋವಿಡ್ ಪಾಸಿಟಿವ್ ದೃಢಪಟ್ಟವರೆಲ್ಲರೂ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದಾರೆ. ಇವರೆಲ್ಲರಿಗೂ ಕೋವಿಡ್ ಲಕ್ಷಣಗಳಿಲ್ಲ. ಆದರೆ ಸ್ವಲ್ಪ ಮೈಕೈ ನೋವು ಕಾಣಿಸಿಕೊಂಡಿದೆ. ಈ ವೇಳೆ ವಿದ್ಯಾರ್ಥಿಗಳೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಸೋಂಕಿತ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜಿನ ಹಾಸ್ಟೆಲ್‌ನಲ್ಲಿ ಆರೈಕೆ ಮಾಡಲಾಗುತ್ತಿದೆ. ಇವರಿಗೆ ಕೋವಿಡ್ ಯಾರ ಸಂಪರ್ಕದಿAದ ಬಂದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಆರಂಭದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಹಾಸ್ಟೆಲ್‌ನ ೨೭೦ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ತಪಾಸಣೆ ವೇಳೆ ೬೬ ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ ೨೦೦ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಸದ್ಯ ಹಾಸ್ಟೆಲ್‌ನಲ್ಲಿ ಸೋಂಕಿತ ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ. ಕಾಲೇಜಿನಲ್ಲಿ ಇತ್ತೀಚೆಗೆ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಪ್ರೆಶರ್ಸ್ ಪಾರ್ಟಿ ಆಯೋಜಿಸಲಾಗಿತ್ತು, ಪಾರ್ಟಿಯಲ್ಲಿ ಪಾಲ್ಗೊಂಡವರಲ್ಲಿ ಯಾರಿಗೋ ಸೋಂಕು ಇದ್ದು, ಆ ಸೋಂಕು ಎಲ್ಲರಿಗೂ ಹರಡಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮತ್ತೆ ನಿರ್ಮಾಣ ಚಟುವಟಿಕೆ ನಿಷೇಧ

ನವದೆಹಲಿ, ನ. ೨೫: ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನಿಸಿದ ಸುಪ್ರೀಂ ಕೋರ್ಟ್ ದೆಹಲಿ ಮತ್ತು ರಾಷ್ಟç ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಮತ್ತೆ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ವಿಧಿಸಿದೆ ಮತ್ತು ಈ ಅವಧಿಗೆ ಕಾರ್ಮಿಕ ಸೆಸ್‌ನಂತೆ ಸಂಗ್ರಹಿಸಲಾದ ನಿಧಿಯಿಂದ ಸಂತ್ರಸ್ತ ಕಾರ್ಮಿಕರಿಗೆ ಜೀವನಾಧಾರ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ವಿಶೇಷ ಪೀಠ, ಬುಧವಾರ ರಾತ್ರಿ ಅಪ್‌ಲೋಡ್ ಮಾಡಿದ ಮಧ್ಯಂತರ ಆದೇಶದಲ್ಲಿ, ಮಧ್ಯಂತರ ಕ್ರಮವಾಗಿ ಮತ್ತು ಮುಂದಿನ ಆದೇಶದವರೆಗೆ ನಾವು ಈ ಕೆಳಗಿನ ಎರಡು ಷರತ್ತುಗಳಿಗೆ ಒಳಪಟ್ಟು ಎನ್‌ಸಿಆರ್‌ನಲ್ಲಿನ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧವನ್ನು ಪುನಃ ವಿಧಿಸುತ್ತೇವೆ ಎಂದು ತಿಳಿಸಲಾಗಿದೆ. ಕೊಳಾಯಿ ಕೆಲಸ, ಒಳಾಂಗಣ ಅಲಂಕಾರ, ವಿದ್ಯುತ್ ಕೆಲಸ ಮತ್ತು ಮರದ ಕೆಲಸದಿಂದ ಕೂಡಿದ ಮಾಲಿನ್ಯರಹಿತ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಸೆಸ್‌ನಂತೆ ಸಂಗ್ರಹಿಸಿದ ಹಣವನ್ನು ರಾಜ್ಯಗಳು ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸುವ ಅವಧಿಗೆ ಜೀವನಾಧಾರವನ್ನು ಒದಗಿಸಲು ಮತ್ತು ಆಯಾ ವರ್ಗದ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ಸೂಚಿಸಲಾದ ವೇತನ ಪಾವತಿಸಲು ಬಳಸಬೇಕು ಎಂದು ಸೂಚಿಸಿದೆ.

ಪೇಜಾವರ ಹಿರಿಯ ಶ್ರೀಗಳ ಬಗ್ಗೆ ಹೇಳಿಕೆ: ಹಂಸಲೇಖ ವಿಚಾರಣೆಗೆ

ಬೆಂಗಳೂರು, ನ. ೨೫: ದಲಿತರ ಮನೆಯಲ್ಲಿ ಬಲಿತರು ಬಂದು ಮಾಂಸಾಹಾರ ಸೇವಿಸುವುದು, ಪೇಜಾವರದ ಹಿರಿಯ ಯತಿಗಳು ದಲಿತಕೇರಿಗೆ ಹೋಗುತ್ತಿದ್ದ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಉಂಟಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ. ಹಂಸಲೇಖ ಗುರುವಾರ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಹಂಸಲೇಖ ಸಮಾಜದಲ್ಲಿ ಸ್ವಾಸ್ಥö್ಯ ಕೆಡಿಸಲು ಪ್ರಯತ್ನಿಸಿದ್ದಾರೆ, ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿದ್ದರು. ಇಷ್ಟು ದಿನ ವಿಚಾರಣೆಗೆ ಸಮಯಾವಕಾಶ ಕೇಳಿದ್ದ ಸಂಗೀತ ನಿರ್ದೇಶಕರು ಇಂದು ಮಧ್ಯಾಹ್ನ ತೀವ್ರ ಭದ್ರತೆ ನಡುವೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ತನಿಖಾಧಿಕಾರಿಯೊಬ್ಬರು ಹಂಸಲೇಖ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು. ಶ್ರೀಗಳ ವಿರುದ್ಧ ಹೇಳಿಕೆ ನೀಡಲು ಕಾರಣವಾದ ಉದ್ದೇಶ ಕುರಿತು ಅವರನ್ನು ಪ್ರಶ್ನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ಭಾಷಣದ ವೇಳೆ ಸಂದರ್ಭಕ್ಕನುಸಾರವಾಗಿ ಪ್ರಸ್ತಾಪಿಸಿದ್ದಾಗಿ, ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ, ಒಂದು ದಿನದ ನಂತರ ಕ್ಷಮೆ ಕೇಳಿದರೂ ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಹಂಸಲೇಖ ಸ್ಪಷ್ಟಪಡಿಸಿದ್ದಾರೆ. ಒಂದು ಗಂಟೆ ಕಾಲದ ನಂತರ ಅವರು ಠಾಣೆಯಿಂದ ನಿರ್ಗಮಿಸಿದರು.

ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದತಿಗೆ ಆಗ್ರಹ

ಬೆಂಗಳೂರು, ನ. ೨೫: ಎಪಿಎಂಸಿ ಕಾಯ್ದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ರದ್ದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ರೈತ ಸಂಘಟನೆಗಳ ಸದಸ್ಯರು ಶುಕ್ರವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯ ಕಬ್ಬು ರೈತರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸುವುದಲ್ಲದೆ, ರಸ್ತೆಗಳಲ್ಲಿಯೇ ಅಡುಗೆಯನ್ನೂ ಮಾಡಲಿದ್ದಾರೆಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದು, ಕನಿಷ್ಟ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನು ಕುರಿತ ನಮ್ಮ ಬೇಡಿಕೆ ಬಗ್ಗೆಯೂ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಗಳನ್ನು ರದ್ದುಪಡಿಸಬೇಕು ಮತ್ತು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಪರಿಷ್ಕರಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಗೊಳಿಸುವ ಕುರಿತು ಕೇಂದ್ರ ಸರ್ಕಾರ ಮತ್ತಷ್ಟು ಸ್ಪಷ್ಟ ಮಾಹಿತಿಗಳನ್ನು ನೀಡಿದ ಬಳಿಕ ಈ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಕಾಯಿದೆ ಜಾರಿಗೆ ಅನುಕೂಲವಾಗುವಂತೆ ರಾಜ್ಯ ಸರಕಾರ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದ್ದು, ಈಗ ಅದನ್ನು ರದ್ದುಗೊಳಿಸಲಾಗುತ್ತಿದೆ.