ಮಡಿಕೇರಿ, ನ. ೨೫: ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗುವ ಹಕ್ಕು ಹೊಂದಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆಮದು ಅಭ್ಯರ್ಥಿಗೆ ಬೆಂಬಲ ಸಿಗಲು ಸಾಧ್ಯವಿಲ್ಲವೆಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಪ್ರತಿಪಾದಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಾಸನ ಜಿ.ಪಂ. ಮಾಜಿ ಸದಸ್ಯ ಮಂಥರ್ ಗೌಡ ಅವರನ್ನು ಹೇಗೆ ಕೊಡಗಿನವರೆಂದು ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು ಇಲ್ಲಿನ ಕಾಂಗ್ರೆಸ್ಸಿಗರು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ತಮ್ಮದಲ್ಲದ ಜಿಲ್ಲೆ ಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಕಾಂಗ್ರೆಸ್ ನೀಡಿದ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಮಹೇಶ್ ಜೈನಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ರೀತಿ ನೀತಿಗಳೇ ಬೇರೆ ಇರುತ್ತದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಜನಪ್ರತಿನಿಧಿಗಳೇ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಾಗಿರುವುದರಿಂದ ಸ್ಥಳೀಯವಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ಅಲ್ಲದೆ ಸ್ಥಳೀಯರೇ ಎಂಎಲ್‌ಸಿ ಆಗುವುದರಿಂದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ ಎನ್ನುವ ಅರಿವು ಕೊಡಗಿನ ಮತದಾರರಿಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸುಮಾರು ೭ ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ರೈತರ ಏಳಿಗೆಗಾಗಿ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ಸಕಾಲದಲ್ಲಿ ರೈತರಿಗೆ ಗೊಬ್ಬರ ಒದಗಿಸಲು ಸಾಧ್ಯವಾಗದ ಹೀನಾಯ ಸ್ಥಿತಿಯಲ್ಲಿ ಕಾಂಗ್ರೆಸ್ ಆಡಳಿತ ನಡೆಯುತ್ತಿತ್ತು ಎಂದು ಟೀಕಿಸಿರುವ ಮಹೇಶ್ ಜೈನಿ, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರಕಾರಗಳು ಕೃಷಿಕ ವರ್ಗಕ್ಕಾಗಿ ಅನುಷ್ಠಾನಗೊಳಿಸುತ್ತಿರುವ ಕಾರ್ಯ ಕ್ರಮಗಳ ಬಗ್ಗೆ ನೈಜ ರೈತರಿಗೆ ಅರಿವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.