ಸೋಮವಾರಪೇಟೆ, ನ. ೨೪: ಜಮೀನಿನ ಮೇಲೆ ಸಾಲ ಪಡೆದು ಅದನ್ನು ತೀರಿಸಿದ ರೈತರಿಗೆ ಬ್ಯಾಂಕ್ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ಅನ್ಯಾಯವಾಗುತ್ತಿದ್ದು, ಋಣಭಾರ ಕಾಲಂನಿAದ ಸಾಲದ ಮಾಹಿತಿಯನ್ನು ತೆಗೆಯದೇ ವೃಥಾ ತೊಂದರೆ ನೀಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಗಣಗೂರು ಗ್ರಾ.ಪಂ. ವ್ಯಾಪ್ತಿಯ ಬೋರ್‌ವೆಲ್ ಬಳಕೆದಾರರ ಸಂಘ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಪ್ರಮುಖರಾದ ಜಿ.ಎಸ್. ಚಂದ್ರಶೇಖರ್, ರೈತರು ತಮ್ಮ ಜಮೀನಿನ ಮೇಲೆ ಕೃಷಿ ಸಾಲ ಪಡೆದಿದ್ದು, ಸಾಲ ಪಡೆಯುವ ಸಂದರ್ಭ ಆರ್‌ಟಿಸಿಯ ಋಣಭಾರ ಕಾಲಂನಲ್ಲಿ ಸಾಲದ ವಿವರ ಮುದ್ರಿಸಲಾಗುತ್ತಿದೆ. ಆದರೆ ಈ ಸಾಲವನ್ನು ಬ್ಯಾಂಕಿಗೆ ಸಂಪೂರ್ಣ ಮರುಪಾವತಿ ಮಾಡಿದರೂ ಸಹ ಕಾಲಂನಿAದ ಸಾಲದ ಮಾಹಿತಿ ತೆಗೆಯುತ್ತಿಲ್ಲ ಎಂದು ದೂರಿದರು.

ಈ ಹಿಂದೆ ಸಾಲ ತೀರಿದ ನಂತರ ಬ್ಯಾಂಕ್‌ನವರು ‘ನೋ ಡ್ಯೂ ಸರ್ಟಿಫಿಕೇಟ್’ ನೀಡುತ್ತಿದ್ದರು. ಇದನ್ನು ಈರ್ವರು ಜಾಮೀನುದಾರರೊಂದಿಗೆ ಉಪ ನೋಂದಣಾಧಿಕಾರಿಗಳ ಕಚೇರಿಗೆ ತಲುಪಿಸಿದರೆ ಆರ್‌ಟಿಸಿ ಕಾಲಂನಿAದ ಸಾಲದ ಮಾಹಿತಿ ತೆಗೆಯುತ್ತಿದ್ದರು. ನಂತರ ಮತ್ತೊಮ್ಮೆ ಬೇರೆ ಬ್ಯಾಂಕ್‌ಗಳಲ್ಲಿ ರೈತರು ಸಾಲ ಪಡೆಯುತ್ತಿದ್ದರು. ಆದರೆ ಇದೀಗ ಬ್ಯಾಂಕ್ ಮತ್ತು ನೋಂದಣಾಧಿಕಾರಿ ಕಚೇರಿಯವರು ಎನ್‌ಡಿಸಿ ನೀಡದೇ ಸತಾಯಿಸುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು.

ಈ ಬಗ್ಗೆ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿದರೆ ಬ್ಯಾಂಕ್‌ನವರನ್ನು ಕೇಳಿ ಎಂದು ಸಬೂಬು ನೀಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದರೆ ಸಬ್ ರಿಜಿಸ್ಟಾçರ್ ಕಚೇರಿಯತ್ತ ಬೆರಳು ತೋರುತ್ತಿದ್ದಾರೆ. ಇದರಿಂದಾಗಿ ಸಮಸ್ಯೆಯಾಗಿದ್ದು, ಸಾಲ ತೀರಿಸಿದ ರೈತರು ಬೇರೆ ಸಾಲ ಮಾಡಲು ಅಸಾಧ್ಯವಾಗಿದೆ ಎಂದು ಚಂದ್ರಶೇಖರ್ ಹೇಳಿದರು.

ತಕ್ಷಣ ಸಮಸ್ಯೆಯನ್ನು ಬಗೆಹರಿಸದಿದ್ದರೆ ಬ್ಯಾಂಕ್ ಹಾಗೂ ಸಬ್ ರಿಜಿಸ್ಟಾçರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಸಿದರು.

ಇದರೊಂದಿಗೆ ತಾಲೂಕಿನಾದ್ಯಂತ ಶೇ. ೯೦ಕ್ಕೂ ಅಧಿಕ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿದ್ದು, ಕಂದಾಯ ಹಾಗೂ ಕಾಫಿ ಬೋರ್ಡ್ ಅಧಿಕಾರಿಗಳು ಕೆಲವೇ ಕೆಲವು ಗ್ರಾಮಗಳಲ್ಲಿ ಸರ್ವೆ ನಡೆಸಿ, ಪರಿಹಾರಕ್ಕೆ ಅರ್ಜಿ ಪಡೆಯುತ್ತಿದ್ದಾರೆ. ಅಧಿಕಾರಿಗಳ ತಾರತಮ್ಯ ನೀತಿಯ ವಿರುದ್ಧವೂ ರೈತ ಸಂಘ ಹೋರಾಟ ಸಂಘಟಿಸಲಿದೆ ಎಂದು ಗೋಷ್ಠಿಯಲ್ಲಿದ್ದ ರೈತ ಸಂಘದ ಸಂಚಾಲಕ ಹೆಚ್.ಬಿ. ರಾಜಪ್ಪ ಎಚ್ಚರಿಸಿದರು.

ಅತಿ ಹೆಚ್ಚು ಮಳೆಯಾಗಿರುವ ಎಲ್ಲಾ ಪ್ರದೇಶದ ರೈತರಿಗೂ ಸರ್ಕಾರದಿಂದ ಪರಿಹಾರ ಸಿಗುವಂತಾಗಬೇಕು. ಕಾಫಿ, ಕಾಳುಮೆಣಸು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಭಾರೀ ಪ್ರಮಾಣದಲ್ಲಿ ನಷ್ಟಕ್ಕೊಳಗಾಗಿದ್ದು, ತಾಲೂಕಿನ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು. ತಪ್ಪಿದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಉಪಾಧ್ಯಕ್ಷ ಯಡೂರು ಕುಶಾಲಪ್ಪ, ಪದಾಧಿಕಾರಿಗಳಾದ ಬಾಣಾವರ ರೇವಣ್ಣ, ಗಣಗೂರು ಶರತ್ ಅವರುಗಳು ಎಚ್ಚರಿಕೆ ನೀಡಿದರು.