ಕೂಡಿಗೆ, ನ. ೨೪: ಮೈಸೂರು ಓ.ಡಿ.ಪಿ. ಸಂಸ್ಥೆ ಮತ್ತು ಹೆಬ್ಬಾಲೆ ನಿಸರ್ಗ ರೈತ ಒಕ್ಕೂಟದ ವತಿಯಿಂದ ಉಚಿತ ಗೊಬ್ಬರ ವಿತರಣೆ ಮತ್ತು ಕೃಷಿ ಯಂತ್ರಗಳ ಕಾರ್ಯಾಗಾರ ಹೆಬ್ಬಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನೆರವೇರಿಸಿ ಮಾತನಾಡಿ, ರೈತರು ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ನೂತನ ಕೃಷಿ ಯಂತ್ರಗಳ ಮಾಹಿತಿಯನ್ನು ಪಡೆದು ಯಾಂತ್ರೀಕೃತ ಬೇಸಾಯಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್, ಸಹಕಾರ ಸಂಘದ ಅಧ್ಯಕ್ಷ ಪರಮೇಶ್, ಸಂಗಮ ಸುದ್ದಿ ವಾಹಿನಿಯ ಸಂಪಾದಕ ರಘು ಸಭೆಯಲ್ಲಿ ಮಾತನಾಡಿದರು. ಕೃಷಿ ಯಂತ್ರದ ಮುಖ್ಯಸ್ಥ ಯಶವಂತ್ ಕೃಷಿ ಯಂತ್ರಗಳು ಬಳಕೆಗೆ ಬಾಡಿಗೆ ದರದಲ್ಲಿ ದೊರಕುವ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದರು. ಸಂಸ್ಥೆಯ ಸಂಯೋಜಕ ಜಾನ್ ಡಿಗ್ರೀಸ್, ಕಾರ್ಯಕರ್ತೆ ಸುಂದರ್ ದಾಸ್, ಮಮತಾ, ಸ್ವಾಮಿ, ನಾರಾಯಣ, ಶಿವರಾಮ ಮೊದಲಾದವರು ಹಾಜರಿದ್ದರು.