ವೀರಾಜಪೇಟೆ, ನ. ೨೪: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳು ಸಮಯ ಪಾಲನೆ ಮಾಡುವ ಮೂಲಕ ಪ್ರತಿ ವಾರದ ಸಭೆಗೆ ಭೇಟಿ ನೀಡಿ ಯೋಜನೆಯ ಸೌಲಭ್ಯಗಳು ಹಾಗೂ ವಿವಿಧ ಕಾರ್ಯಕ್ರಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡುವಂತೆ ಯೋಜನೆಯ ನಿರ್ದೇಶಕ ಡಾ. ಯೋಗೇಶ್ ಹೇಳಿದರು.
ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಬಾಲಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ಮತ್ತು ವೀರಾಜಪೇಟೆ ನೂತನ ಸೇವಾ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಯೋಗೇಶ್ ಯೋಜನೆಯ ಸೌಲಭ್ಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಂದರ್ಭ ಸಮಸ್ಯೆ ಎದುರಾದಾಗ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಕೂಡ ಅಗತ್ಯವಾಗಿರುತ್ತದೆ. ಯೋಜನೆಯ ನಿಯಮಗಳನ್ನು ಸೇವಾಪ್ರತಿನಿಧಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದರಲ್ಲದೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆಯನ್ನು ತರಬೇತಿ ಸಂದರ್ಭ ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಮಡಿಕೇರಿ ಮತ್ತು ವೀರಾಜಪೇಟೆ ಯೋಜನಾಧಿಕಾರಿಗಳಾದ ಸಿ.ಹೆಚ್. ಪದ್ಮಯ್ಯ ಹಾಗೂ ಸುಕ್ರುಗೌಡ, ಮೇಲ್ವಿಚಾರಕರಾದ ಅನುಷ ರೈ, ರತ್ನಮೈಪಾಲ, ಸಮನ್ವಯಾಧಿಕಾರಿ ಆನಂದ್ ಅವರುಗಳು ಸೇವಾಪ್ರತಿನಿಧಿಗಳಿಗೆ ತರಬೇತಿ ನೀಡಿದರು.