ಕಣಿವೆ, ನ. ೨೪: ದುಬಾರೆಯ ಕಾವೇರಿ ನದಿ ದಂಡೆಯಲ್ಲಿನ ಭತ್ತದ ಕೃಷಿಕರು ಆನೆಗಳ ಹಾವಳಿಯಿಂದ ಸಾಕಷ್ಟು ಬೇಸತ್ತಿದ್ದಾರೆ.
ಕಳೆದ ಒಂದು ವಾರದಿಂದ ಸತತವಾಗಿ ಏಳೆಂಟು ಆನೆಗಳ ಹಿಂಡು ಕಾವೇರಿ ನದಿಯನ್ನು ದಾಟಿ ಬಂದು ನಾವು ಹತ್ತಾರು ಎಕರೆ ಭೂಮಿಯಲ್ಲಿ ಕಷ್ಟಪಟ್ಟು ಬೆಳೆದಿದ್ದಂತಹ ಭತ್ತದ ಫಸಲನ್ನು ತುಳಿದು ಹಾಗೂ ತಿಂದು ನಾಶ ಪಡಿಸುತ್ತಿವೆ ಎಂದು ಸ್ಥಳೀಯ ಕೃಷಿಕರಾದ ಮೈಲಕಂಡ್ರ ರಾಧಾ, ಮೈಲಕಂಡ್ರ ನಾಗರಾಜು ಹಾಗೂ ಮೈಲಕಂಡ್ರ ಡಿಂಪಲ್ ಎಂಬವರು ‘ಶಕ್ತಿ’ಯೊಂದಿಗೆ ರೋಧಿಸಿದ್ದಾರೆ.
ಪ್ರತಿ ದಿನ ರಾತ್ರಿಯಾಯಿತು ಎಂದರೆ ಸಾಕು ನದಿ ದಂಡೆಯಲ್ಲಿ ಖಾಸಗಿ ಯಾಗಿ ಮಹಿಳೆಯೊಬ್ಬರು ಸಾಕಿರುವ ಎಂಟು ಸಾಕಾನೆಗಳು ಲಗ್ಗೆಯಿಡುತ್ತಿವೆ. ಈ ಬಗ್ಗೆ ನಾವು ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಈ ಮಧ್ಯೆ ಸಾಕಾನೆಗಳನ್ನು ನಿರ್ವಹಿಸುತ್ತಿರುವ ಖಾಸಗಿ ಮಹಿಳೆಯೋರ್ವರಿಗೆ ಸಾಕಾನೆ ಗಳನ್ನು ನಿಗದಿತ ವ್ಯಾಪ್ತಿಯಲ್ಲಿಯೇ ನಿರ್ವಹಿಸಬೇಕು. ಕೃಷಿಕರಿಗೆ ತೊಂದರೆಯಾಗದAತೆ ಎಚ್ಚರ ವಹಿಸಬೇಕೆಂದು ನ್ಯಾಯಾಲಯ ಆದೇಶಿಸಿದ್ದರೂ ಕೂಡ ಸಾಕಾನೆ ಗಳನ್ನು ಸಂಬAಧಿತ ಮಹಿಳೆ ಕಟ್ಟುತ್ತಿಲ್ಲ. ಹಾಗಾಗಿ ಹಸಿದ ಹೊಟ್ಟೆ ತುಂಬಿಸಲು ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದಾಗಿ ಅಪಾರ ಪ್ರಮಾಣದ ಭತ್ತದ ಫಸಲು ಹಾನಿಯಾಗಿದೆ ಎಂದು ಮೈಲಕಂಡ್ರ ಕುಟುಂಬದ ಕೃಷಿಕರು ದೂರಿದ್ದಾರೆ.
ಈ ಬಗ್ಗೆ ಸಾಕಾನೆಗಳ ಪಾಲಕಿಗೆ ನಾವು ಬೆಳೆ ನಷ್ಟದ ಬಗ್ಗೆ ದೂರು ಹೇಳಿದಾಗ, ನಮ್ಮ ಆನೆಗಳು ನಿಮ್ಮಲ್ಲಿಗೆ ಬರಲ್ಲ. ದುಬಾರೆಯ ಕಾಡಾನೆಗಳ ಕೃತ್ಯವಿರಬಹುದು. ನೀವು ಅರಣ್ಯ ಇಲಾಖೆಗೆ ದೂರು ನೀಡಿ ಎಂದು ಮಹಿಳೆ ಹೇಳುತ್ತಾರೆ. ನಾವು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೆ, ನಮ್ಮ ಕಾಡಾನೆಗಳಾಗಲೀ, ಸಾಕಾನೆಗಳಾಗಲೀ ಅಲ್ಲಿಗೆ ಬರಲು ಸಾಧ್ಯವಿಲ್ಲ. ಆ ಆನೆಗಳು ಅವರದ್ದೇ. ಅಲ್ಲೇ ಪ್ರಶ್ನಿಸಿಕೊಳ್ಳಿ ಎಂದು ಅರಣ್ಯ ಸಿಬ್ಬಂದಿಗಳು ಹೇಳುತ್ತಾರೆ ಎಂದು ಕೃಷಿಕ ಡಿಂಪಲ್ ಬೇಸರ ವ್ಯಕ್ತಪಡಿಸುತ್ತಾರೆ.
ನಾವು ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಕಷ್ಟ ಪಟ್ಟು ಕೃಷಿ ಮಾಡುತ್ತೇವೆ. ಆದರೆ, ಕೈಗೆ ಬಂದ ಫಸಲು ವನ್ಯ ಪ್ರಾಣಿಗಳ ಪಾಲಾಗುತ್ತಿದೆ.
ಈ ಬಗ್ಗೆ ಕೂಡಲೇ ಸಂಬAಧಿತ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅಪಾರ ಹಾನಿಗೆ ಒಳಗಾಗಿರುವ ನಮಗೆ ಸೂಕ್ತ ಪರಿಹಾರ ನೀಡಬೇಕು. ಹಾಗೆಯೇ ಯಾವುದೇ ಆನೆಗಳು ಕೂಡ ನಮ್ಮಲ್ಲಿಗೆ ಲಗ್ಗೆ ಇಡದಂತೆ ಕ್ರಮ ವಹಿಸಬೇಕು ಎಂದು ಮತ್ತೋರ್ವ ಬೆಳೆ ನಾಶದ ನೊಂದ ಕೃಷಿಕ ಕಳಂಜನ ಶರತ್ ಒತ್ತಾಯಿಸಿದ್ದಾರೆ.