ವೀರಾಜಪೇಟೆ, ನ. ೨೪: ಯೂತ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆ ವೀರಾಜಪೇಟೆ, ಹೋಂ ಸಿನಿಮಾಸ್ ಮೈಸೂರು ಪ್ರಮುಖ ಪ್ರಯೋಜಕತ್ವದೊಂದಿಗೆ ವಿ.ಪಿ.ಎಲ್. ಸೀಸನ್ - ೨೦೨೧ ಕ್ರಿಕೆಟ್ ಹಬ್ಬಕ್ಕೆ ಪೆರುಂಬಾಡಿ ಗ್ರಾಮದ ಮ್ಯಾಗ್ನೋಲಿಯ ರೆಸಾರ್ಟ್ ಸಭಾಂಗಣದಲ್ಲಿ ಕ್ರೀಡಾಪಟುಗಳ ಬಿಡ್ಡಿಂಗ್ ನಡೆಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಿಕ್ಷಕ ಮತ್ತು ಕ್ರೀಡಾಪಟು ಸುದೇಶ್ ಅವರು ಕ್ರೀಡೆಯು ನಿಂತ ನೀರಲ್ಲ. ಹರಿಯುವ ನೀರಿನಂತೆ. ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕ ಸಮತೋಲನ ಕಾಪಾಡಿಕೊಳ್ಳಬಹುದು. ನಗರದ ಉತ್ಸಾಹಿ ಯುವಕರಿಗೆ ವಿ.ಪಿ.ಎಲ್. ಮಾದರಿ ಕ್ರೀಡೆಯನ್ನು ಆಯೋಜಿಸಿ ಕೊಂಡು ಮೂರು ವರ್ಷಗಳನ್ನು ಪೂರೈಸಿ ನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡಲಾಗುತ್ತಿದೆ. ಇದು ಕ್ರೀಡಾಸಕ್ತರು, ಆಯೋಜಕರಿಗೆ ನೀಡಿದ ಸ್ಫೂರ್ತಿಯಾಗಿದೆ. ಕ್ರೀಡಾ ಮಾನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಯೂತ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆ ನಗರದ ಯುವಕರಿಗಾಗಿ ಕ್ರಿಕೆಟ್ ಉತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಇದು ನಗರವಾಸಿಗಳಿಗೆ ಹೆಮ್ಮೆಯೆನಿಸುತ್ತಿದೆ. ಮುಂದೆಯೂ ನಗರ ಕ್ರಿಕೆಟ್ ಖ್ಯಾತಿ ಪಡೆಯಲಿ ಮತ್ತು ಬಹುಮುಖ ಪ್ರತಿಭೆಗಳಿಗೆ ವೇದಿಕೆ ಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಮ್ಯಾಗ್ನೋಲಿಯ ರೆಸಾರ್ಟ್ಸ್ನ ವ್ಯವಸ್ಥಾಪಕ ಪ್ರವೀಣ್, ಹೆರಿಟೇಜ್ ಸ್ಪೋರ್ಟ್ಸ್ನ ಮಾಲೀಕ ಅಭಿಶೇಕ್ ಮತ್ತು ವಿ.ಪಿ.ಎಲ್.ನ ಮಾರ್ಗದರ್ಶಕ ಮಾದಂಡ ತಿಮ್ಮಯ್ಯ ಉಪಸ್ಥಿತರಿದ್ದರು.
ವೀರಾಜಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್ ೨೦೨೧ ರ ಕ್ರಿಕೆಟ್ ಉತ್ಸವ ಡಿಸೆಂಬರ್ ೨೧ ರಿಂದ ೨೭ ರವರೆಗೆ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಆಯೋಜನೆ ಗೊಳ್ಳಲಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ನಗರದಿಂದ ಆಯ್ದ ೨೧೦ ಮಂದಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಪಟುಗಳನ್ನು ೧೪ ಕ್ರೀಡಾ ತಂಡಗಳು ತಲಾ ತಂಡಕ್ಕೆ ೧೫ ಕ್ರೀಡಾಪಟುಗಳಂತೆ ಆಯ್ಕೆ ಗೊಳಿಸಲಾಗುತ್ತಿದೆ. ವಿ.ಪಿ.ಎಲ್.ನಲ್ಲಿ ಪ್ರಮುಖವಾಗಿ ಎಂ.ವೈ.ಸಿ.ಸಿ., ಕೌಬಾಯ್ಸ್, ಮನ್ನಾ ಸೂಪರ್ ಕಿಂಗ್ಸ್, ರಾಯಲ್ ಫ್ರೆಂಡ್ಸ್, ಕಿಂಗ್ ಫಿಷರ್, ಮೆಟ್ರೋ ಕ್ರಿಕೆರ‍್ಸ್, ಲಿಥಿನ್ ಕ್ರಿಕೆರ‍್ಸ್, ಚಾಲೆಂರ‍್ಸ್, ಆದ್ಯಾ ಲೀಲಾ ಕೊನ್, ಟೀಂ ಮಹಾಮೇಳ, ಅಕ್ಯುಬ್ ಸ್ಪೆöÊಸಿಸ್, ಟೀಂ ಸ್ಪಿರಿಟ್, ರಾರ‍್ಸ್ ರಾಜಥಾದ್ರೀಸ್ ಮತ್ತು ಆರ್.ಸಿ.ವಿ. ರೀಶೆಪ್ ತಂಡಗಳು ಭಾಗವಹಿಸಲಿದೆ. ೨೧೦ ಮಂದಿ ಆಟಗಾರರು ಬಿಡ್ಡಿಂಗ್ ಮೂಲಕ ತಂಡಗಳಿಗೆ ಸೇರ್ಪಡೆಗೊಂಡರು.
ಕ್ರೀಡಾ ಉತ್ಸವದ ಪ್ರಮುಖ ಆಯೋಜಕ ಸಂಸ್ಥೆಯಾದ ಯೂತ್ ಫ್ರೆಂಡ್ಸ್ ಸಂಸ್ಥೆಯ ಪದಾಧಿಕಾರಿಗಳು, ತಾಂತ್ರಿಕ ವರ್ಗ, ಸಂಯೋಜಕರು, ತಂಡಗಳ ಮಾಲೀಕರು, ಪ್ರಮುಖ ಆಟಗಾರರು ಬಿಡ್ಡಿಂಗ್ ಕಾರ್ಯಕ್ರಮದಲ್ಲಿ ಹಾಜರಿದ್ದರು.