ಕೊಡ್ಲಿಪೇಟೆ,ನ.೨೨: ಕೊಡ್ಲಿಪೇಟೆ ಹೋಬಳಿಗೆ ಒಳಪಡುವ ಬೆಸೂರು ಮುಖ್ಯರಸ್ತೆಯಿಂದ ಕಟ್ಟೆಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ.
ಕಳೆದ ಅನೇಕ ದಶಕಗಳಿಂದ ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಆಗ್ರಹಿಸುತ್ತಾ ಬಂದಿರುವ ಗ್ರಾಮಸ್ಥರ ಕೂಗು ಅರಣ್ಯರೋಧನವಾಗಿದ್ದು, ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿ ವರ್ಗ ಇತ್ತ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಸೂರು ಗ್ರಾಮದಿಂದ ಕಟ್ಟೆಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಕಳೆದ ಕೆಲ ದಶಕಗಳಿಂದಲೇ ಗುಂಡಿ ಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆಯೇ ಮಾಯವಾಗಿದ್ದು, ಡಾಂಬರು ಸಂಪೂರ್ಣ ಕಿತ್ತು ಬಂದು ಹೊಂಡಾ ಗುಂಡಿಗಳು ನಿರ್ಮಾಣವಾಗಿವೆ.
ಕಟ್ಟೆಪುರ ಗ್ರಾಮಸ್ಥರು ಪಟ್ಟಣಕ್ಕೆ ಆಗಮಿಸಲು, ಶಾಲಾ ಕಾಲೇಜು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದು, ರಸ್ತೆಯ ಅವ್ಯವಸ್ಥೆಯಿಂದಾಗಿ ವಾಹನಗಳು ಸಂಚರಿಸಲೂ ಕಷ್ಟಕರವಾಗಿದೆ. ಕಳೆದ ಕೆಲ ಸಮಯದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರಸ್ತೆ ಇನ್ನಷ್ಟು ಹದಗೆಟ್ಟಿದ್ದು, ವಾಹನಗಳು ತೆರಳಿದರೆ ಬಿಡಿಭಾಗಗಳು ರಸ್ತೆಯ ಗುಂಡಿಗಳಿಗೆ ಉದುರುತ್ತಿವೆ ಎಂದು ಗ್ರಾಮಸ್ಥ ಸಂತೋಷ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಹತ್ತಾರು ವರ್ಷಗಳಿಂದಲೂ ರಸ್ತೆ ದುರಸ್ತಿಗಾಗಿ ಸಂಬAಧಿಸಿದ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ ಸ್ಪಂದನೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ತಕ್ಷಣ ರಸ್ತೆ ದುರಸ್ತಿಗೆ ಅನುದಾನ ಮೀಸಲಿಟ್ಟು ಕಾಮಗಾರಿ ನಿರ್ವಹಿಸದಿದ್ದರೆ ಬೆಸೂರು ಮುಖ್ಯರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.