ಮಡಿಕೇರಿ, ನ. ೨೨: ದಲಿತ ಸಂಘರ್ಷ ಸಮಿತಿ ವತಿಯಿಂದ ಕಡಗದಾಳು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವಾಸುದೇವ ಗಾಳಿಬೀಡು, ನಿಜವಾಗಿಯೂ ಶಿಕ್ಷಕರು ದೇವರಿಗೆ ಸಮಾನರು, ವಿದ್ಯೆ ಇದ್ದರೆ ಮಾತ್ರ ಸಾಧನೆ ಮಾಡಬಹುದು, ವಿದ್ಯೆಗೆ ಬಹಳ ಪ್ರಾಮುಖ್ಯತೆ ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್., ಸಂಘಟನೆಯ ಮುಖ್ಯ ಉದ್ದೇಶ ಶಿಕ್ಷಣಕ್ಕೆ ಒತ್ತು ನೀಡುವುದಾಗಿದ್ದು, ಕಳೆದ ಹತ್ತು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸುವುದು ನಮ್ಮ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ನಟರಾಜ್ ಅವರು ಮಾತನಾಡಿ, ನಾನು ಕೂಡ ಸರಕಾರಿ ಶಾಲೆಯಲ್ಲಿ ಕಲಿತವನು ಸರ್ಕಾರಿ ಶಾಲೆಯನ್ನು ಯಾರೂ ಕೂಡ ದೂರ ಮಾಡಬೇಡಿ, ಹಿಂದಿನ ಕಾಲಕ್ಕಿಂತ ಈಗಿನ ಕಾಲದಲ್ಲಿ ಸರ್ಕಾರಿ ಶಾಲೆಯಲ್ಲಿ ಹಲವು ಬದಲಾವಣೆಗಳಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಕೊಡಗು ಜೆಡಿಎಸ್ ಜಿಲ್ಲಾಧ್ಯಕ್ಷ ಗಣೇಶ್ ಮಾತನಾಡಿ ಸರಕಾರಿ ಶಾಲೆಯಲ್ಲಿ ಓದಿದ ಕಾರಣಕ್ಕಾಗಿ ನಾವು ಇಷ್ಟು ಬೆಳೆದಿದ್ದೇವೆ, ನಮ್ಮೊಂದಿಗೆ ಕಲಿತ ಹಲವು ಜನರು ಒಳ್ಳೆಯ ಅಧಿಕಾರಿಗಳಾಗಿ, ವಕೀಲರಾಗಿ, ರಾಜಕಾರಣಿಗಳಾಗಿ ಮತ್ತು ಒಳ್ಳೆಯ ವ್ಯಾಪಾರಸ್ಥರಾಗಿದ್ದಾರೆ.

ಮುಂದಿನ ನಿಮ್ಮ ಹೆಚ್ಚಿನ ವಿದ್ಯಾಭ್ಯಾಸ ಸರಕಾರಿ ಶಾಲೆಯಲ್ಲಿ ಮುಂದುವರಿಯಲಿ, ಸಮಾಜದಲ್ಲಿರುವ ಬಹಳಷ್ಟು ಸಾಧಕರು ಸರಕಾರಿ ಕನ್ನಡ ಶಾಲೆಯಲ್ಲಿ ಓದಿದವರು, ತಾವುಗಳು ಸರಕಾರಿ ಶಾಲೆಯಲ್ಲಿ ಓದಿರುವುದು ಎನ್ನುವ ಕೀಳರಿಮೆ ಮಾಡಬೇಡಿ ಎಂದರು. ಮತ್ತೋರ್ವ ಅತಿಥಿ ಪತ್ರಕರ್ತ ರವಿಕುಮಾರ್ ಮಾತನಾಡಿ, ನಿಸ್ವಾರ್ಥ ಸೇವೆ ಮಾಡುವ ಶಿಕ್ಷಕರ ಸೇವೆಯನ್ನು ಮೆಚ್ಚಲೇಬೇಕು, ಈಗಿನ ಮಕ್ಕಳು ತುಂಬಾ ಬುದ್ಧಿವಂತರು, ಆದ್ದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.

ಆಧುನಿಕ ತಂತ್ರಜ್ಞಾನ ಮುಂದುವರೆದಿದ್ದು ಅದಕ್ಕೆ ಹೊಂದಿಕೊAಡು ಉತ್ತಮ ನಾಗರಿಕರಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ತಾಲೂಕು ಸಂಚಾಲಕರಾದ ಎ.ಪಿ. ದೀಪಕ್ ಅಂಬೇಡ್ಕರ್ ಅವರ ಮುಖ್ಯಧ್ಯೇಯ ಪ್ರಗತಿಗೆ ಶಿಕ್ಷಣವೇ ಮೂಲ ಮಾರ್ಗ ಎನ್ನುವಂತೆ ಒಂದು ಧ್ಯೇಯವನ್ನು ನಮ್ಮಲ್ಲಿ ಅಳವಡಿಸಿಕೊಂಡು ಶಿಕ್ಷಣಕ್ಕೆ ಒತ್ತುಕೊಟ್ಟು ಕಾರ್ಯಕ್ರಮ ಮಾಡುವ ಸಂಘಟನೆ ಇದ್ದರೆ ಅದು ನಮ್ಮ ಸಂಘಟನೆ ಮಾತ್ರ ಎಂದರು.

ಕಾರ್ಯಕ್ರಮದಲ್ಲಿ ಸೋಮಣ್ಣ ಕಾರ್ಯದರ್ಶಿಗಳು ಲಯನ್ಸ್ ಕ್ಲಬ್, ಭಾರತಿ ಸದಸ್ಯರು ಗ್ರಾಮ ಪಂಚಾಯತ್ ಕಡಗದಾಳು, ಗೀತಾ ಸದಸ್ಯರು ಗ್ರಾಮ ಪಂಚಾಯಿತಿ ಕಡಗದಾಳು, ಗಂಗಮ್ಮ ಎಂ.ಜೆ ಮುಖ್ಯ ಶಿಕ್ಷಕರು ಹಾಜರಿದ್ದರು. ನಂತರ ಶಾಲೆಯ ಎಲ್ಲಾ ಶಿಕ್ಷಕರನ್ನು ಮತ್ತು ಅಡುಗೆ ಸಿಬ್ಬಂದಿಯವರನ್ನು ಹಾಗೂ ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೆಚ್.ಎಂ. ರೋಹಿಣಿ ಸ್ವಾಗತಿಸಿ, ಹೆಚ್.ಬಿ. ಸಂತೋಷ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.