ಸೋಮವಾರಪೇಟೆ, ನ. ೨೩: ರಾಜ್ಯದ ಪ್ರತಿಷ್ಠಿತ ಸಂಘಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಕೊಡಗು ಜಿಲ್ಲೆಯಿಂದಲೂ ಓರ್ವರು ನಿರ್ದೇಶಕರು ಆಯ್ಕೆಯಾಗಬೇಕಿದ್ದು, ಒಟ್ಟು ೯ ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಇಂದು ೭ ಮಂದಿ ನಾಮಪತ್ರ ಸಲ್ಲಿಸಿದ್ದು, ಈವರೆಗೆ ಒಟ್ಟು ೯ ಮಂದಿ ಉಮೇದುವಾರಿಕೆ ಸಲ್ಲಿಸಿದಂತಾಗಿದೆ. ರಾಜ್ಯ ಒಕ್ಕಲಿಗರ ಸಂಘಕ್ಕೆ ಕೊಡಗು ಜಿಲ್ಲೆಯಿಂದಲೂ ಒಂದು ನಿರ್ದೇಶಕ ಸ್ಥಾನದ ಅವಕಾಶವಿದ್ದು, ಈಗಾಗಲೇ ಪ್ರಚಾರ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ.
ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಹೆಚ್.ಎನ್. ರವೀಂದ್ರ ಹರಪಳ್ಳಿ ಅವರು ಪ್ರಥಮವಾಗಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು ೭ ಮಂದಿ ಉಮೇದುವಾರಿಕೆ ಸಲ್ಲಿಸಿದರು.
ರವೀಂದ್ರ ಅವರು ೨ ನಾಮಪತ್ರ ಸಲ್ಲಿಸಿದ್ದರೆ, ಉಳಿದಂತೆ ಸೋಮವಾರಪೇಟೆ ಚೌಡ್ಲು ನಿವಾಸಿ ಸಿ.ಕೆ. ರಾಜೀವ, ತಾಕೇರಿ ಸುರೇಂದ್ರ, ಹಾನಗಲ್ಲು ಹೆಚ್.ವಿ. ಮಿಥುನ್, ಹೆಬ್ಬಾಲೆಯ ಹೆಚ್.ಎಸ್. ಚೇತನ್, ಕೊಡ್ಲಿಪೇಟೆಯ ತೇಜಕುಮಾರ್, ಕೆ.ಎನ್. ಮಂಜುನಾಥ್, ವೀರಾಜಪೇಟೆಯ ಶುಭಾಷಿಣಿ, ಮಡಿಕೇರಿಯ ವಿ.ಜಿ. ಮೋಹನ್ ಅವರುಗಳು ತಮ್ಮ ಬೆಂಬಲಿಗ ರೊಂದಿಗೆ ನಾಮಪತ್ರ ಸಲ್ಲಿಸಿದರು.
ಡಿ. ೧೨ಕ್ಕೆ ಚುನಾವಣೆ: ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಅವಕಾಶ ಮುಕ್ತಾಯಗೊಂಡಿದ್ದು, ತಾ. ೨೪ ರಂದು (ಇಂದು) ನಾಮಪತ್ರ ಪರಿಶೀಲನೆ, ೨೫ರ ಮಧ್ಯಾಹ್ನ ೩ ಗಂಟೆವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ, ತಾ. ೨೭ ರಂದು ಅಭ್ಯರ್ಥಿಗಳಿಗೆ ಚಿಹ್ನೆ ನಿಗದಿ, ಡಿ. ೧೨ರಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮಡಿಕೇರಿ ಹಾಗೂ ಸೋಮವಾರಪೇಟೆಯಲ್ಲಿ ಮತದಾನ, ಡಿ. ೧೫ ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.