ಮಡಿಕೇರಿ, ನ. ೨೩: ಇಂದು ಪೂರ್ವಾಹ್ನ ಕಡಗದಾಳು ಬಳಿಯ ಬೊಟ್ಲಪ್ಪ ಪೈಸಾರಿಯ ತೋಟವೊಂದರಲ್ಲಿ ಕಾಫಿ ಕುಯ್ಯುತ್ತಿದ್ದ ಮಹಿಳೆಯೊಬ್ಬರ ತಲೆಭಾಗಕ್ಕೆ ಮರದ ಕೊಂಬೆಗಳು ಬಿದ್ದು, ಮೆದುಳು ಛಿದ್ರಗೊಂಡು ಸಾವಿಗೀಡಾದ ದಾರುಣ ಘಟನೆ ಸಂಭವಿಸಿದೆ. ತೋಟದಲ್ಲಿ ತೀವ್ರ ಗಾಳಿ ಬೀಸುತ್ತಿದ್ದು, ನಂದಿ ಮರದ ಕೊಂಬೆಯೊAದು ಸನಿಹದಲ್ಲಿದ್ದ ಇತರ ಎರಡು ಮರಗಳಿಗೆ ಬಡಿದು, ಆ ಮರಗಳ ಕೊಂಬೆಗಳು ತುಂಡಾಗಿ ಕಾಫಿ ಕೊಯ್ಯುವಲ್ಲಿ ಮಗ್ನರಾಗಿದ್ದ ಪುಷ್ಪ (೪೩) ಎಂಬ ಮಹಿಳೆಯ ತಲೆಗೆ ತೀವ್ರವಾಗಿ ಅಪ್ಪಳಿಸಿದವು.

ತೀವ್ರ ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ಸನಿಹದ ತೋಟಗಳ ಕಾರ್ಮಿಕರು ಭಾರೀ ಶಬ್ದ ಕೇಳಿ ಓಡಿ ಬಂದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೆಲವೇ ಕ್ಷಣದಲ್ಲಿ ಆಕೆ ಗತಪ್ರಾಣರಾದರು. ಈ ನಡುವೆ ಸ್ಥಳದಲ್ಲಿ ಇನ್ನೂ ಆರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೊಂಬೆಗಳು ಬೀಳುತ್ತಿದ್ದ ದೃಶ್ಯವನ್ನು ಕಂಡ ಪ್ರೇಮಾ ಎಂಬಾಕೆ ಬೊಬ್ಬೆ ಹಾಕಿದಾಗ ಇತರರು ಸ್ಥಳದಿಂದ ಪ್ರಾಣರಕ್ಷಣೆಗಾಗಿ ಓಡಿ ತಪ್ಪಿಸಿಕೊಂಡರು, ಮತ್ತೊಬ್ಬ ಪುಷ್ಪ ಎಂಬ ಮಹಿಳೆ ಮಾತ್ರ ಕೊಂಬೆಗಳ ನಡುವೆ ಸಿಲುಕಿಕೊಂಡು ಆಕೆಯ ಬಲಭುಜ ತುಂಡರಿಸಲ್ಪಟ್ಟಿದೆ. ಆಕೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೊಟ್ಲಪ್ಪ ಪೈಸಾರಿಯ ಸುಬ್ಬಣ್ಣ ಅವರ ಪುತ್ರರಾದ ಅರುಣ್ ಮತ್ತು ಕಿರಣ್ ಎಂಬವರುಗಳ ತೋಟದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಮಹಿಳೆ ಪುಷ್ಪ

(ಮೊದಲ ಪುಟದಿಂದ) ದಿ. ವಿಶ್ವನಾಥ ಎಂಬವರ ಪತ್ನಿಯಾಗಿದ್ದು, ಅವರ ಇಬ್ಬರು ಹೆಣ್ಣು ಮಕ್ಕಳು ವಿವಾಹಿತರಾಗಿದ್ದಾರೆ. ಮತ್ತೊಬ್ಬ ಪುತ್ರ ಅಭಿ (೨೦) ಎಂಬಾತ ಇದೇ ತೋಟದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಮತ್ತೊಬ್ಬ ಗಾಯಾಳು ಪುಷ್ಪ ಎಂಬಾಕೆ ಪದ್ಮಯ್ಯ ಎಂಬವರ ಪತ್ನಿಯಾಗಿದ್ದಾರೆ.

ಪ್ರಾಕೃತಿಕ ವಿಕೋಪದಿಂದಾಗಿ ಈ ವಿಭಾಗದಲ್ಲಿ ಭಾರೀ ಮಳೆ, ರಭಸದ ಗಾಳಿಯೊಂದಿಗೆ ಬೀಳುತ್ತಿದ್ದು, ತೀವ್ರ ಗಾಳಿಯಿಂದಾಗಿ ಈ ಮರದ ಕೊಂಬೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆ ಸಂದರ್ಭ ಉಂಟಾದ ಭಾರೀ ಶಬ್ದವು ಸುತ್ತಮುತ್ತಲಿನ ನಿವಾಸಿಗಳಲ್ಲಿ ನಡುಕ ಉಂಟುಮಾಡಿದೆ. ಇಂದು ಸಂಜೆ ಸ್ಥಳಕ್ಕೆ ಎಸ್‌ಐ ಸದಾಶಿವ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮೃತ ಪುಷ್ಪಳ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅವರ ಬೊಟ್ಲಪ್ಪ ಪೈಸಾರಿಯ ನಿವಾಸಕ್ಕೆ ಸಾಗಿಸಲಾಗಿದೆ. ಅಂತ್ಯಕ್ರಿಯೆಯನ್ನು ಬುಧವಾರ ನಡೆಸಲಿರುವುದಾಗಿ ತಿಳಿದು ಬಂದಿದೆ.

( ಮಾಹಿತಿ : ಗ್ರಾ.ಪಂ. ಸದಸ್ಯೆ ಭಾರತಿ,

ಚಿತ್ರ : ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್)