ಕೂಡಿಗೆ, ನ. ೨೩: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಆನೆ ಕೆರೆ ಸಮೀಪ ಹೊಂದಿಕೊAಡಿರುವ ಜಾಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳ ಕಸವನ್ನು ಸುರಿದಿರುವುದರಿಂದ ದುರ್ವಾಸನೆ ಬೀರುತ್ತಿದೆ. ದನಕರುಗಳು ಪ್ಲಾಸ್ಟಿಕ್ ತಿಂದು ಹಾಕುತ್ತಿವೆ. ಕಸವು ಸಮೀಪದ ಆನೆ ಕೆರೆಗೆ ಗಾಳಿಯಲ್ಲಿ ಹಾರಿ ನೀರು ಮಲಿನವಾಗುತ್ತಿರುವುದನ್ನು ವಿರೋಧಿಸಿ ಚಿಕ್ಕತ್ತೂರು ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಕಸವನ್ನು ಆನೆಕೆÀರೆಯ ಮುಖ್ಯ ರಸ್ತೆಯ ಸಮೀಪದಲ್ಲಿ ಸುರಿದ ಪರಿಣಾಮ ಬಾರೀ ತೊಂದರೆಗಳು ಆಗುತ್ತಿರುವ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ತಿಳಿಸಿದರೂ ಸಮರ್ಪಕವಾದ ಕ್ರಮವನ್ನು ತೆಗೆದುಕೊಳ್ಳದೆ ಇರುವುದರಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಚಿಕ್ಕತ್ತೂರು ಗ್ರಾಮ ಪ್ರಮುಖರಾದ ಪ್ರಶಾಂತ್, ಉದಯ, ನವೀನ್ ತಿಳಿಸಿದರು. ಆನೆ ಕೆರೆ ಸಮೀಪದಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಈಗಾಗಲೇ ಕಸ ವಿಲೇವಾರಿ ಘಟಕದ ಕಾಮಗಾರಿಯು ನಡೆಯುತ್ತಿದ್ದು, ಮಳೆ ನೆಪದಲ್ಲಿ ಮುಖ್ಯ ರಸ್ತೆಯ ಸಮೀಪದಲ್ಲಿ ಕಸವನ್ನು ಸುರಿದಿರುತ್ತಾರೆ. ವ್ಯವಸ್ಥೆಯನ್ನು ಸರಿಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಕೂಡುಮಂಗಳೂರು ಪ್ರಶಾಂತ್, ದರ್ಮಣ್ಣ, ಸಂತೋಷ್, ಉದಯ ದೀಲಿಪ್, ನಾಗೇಂದ್ರ, ನವೀನ್, ಮಂಜುನಾಥ, ಕಾರ್ಯಪ್ಪ ಸೇರಿದಂತೆ ಚಿಕ್ಕತ್ತೂರು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರತಿಭಟನೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮತ್ತು ಉಪಾಧ್ಯಕ್ಷ ಬಾಸ್ಕರ್ ನಾಯಕ್ ಭೇಟಿ ನೀಡಿ ಕಸ ವಿಲೇವಾರಿ ಘಟಕದ ಸ್ಥಳಕ್ಕೆ ಕಸ ಸಂಗ್ರಹ ಆಟೋ, ಮಳೆಯಿಂದಾಗಿ ತೆರಳಲು ಸಾಧ್ಯವಾಗದ ಕಾರಣದಿಂದಾಗಿ ರಸ್ತೆ ಸಮೀಪದಲ್ಲಿ ಕಸ ಸುರಿಯಲಾಗಿದೆ. ಶೀಘ್ರದಲ್ಲೇ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಕಸದ ರಾಶಿಯನ್ನು ಜೆ.ಸಿ.ಬಿ. ಯಂತ್ರದ ಮೂಲಕ ಮಣ್ಣು ಸುರಿದು ಮುಚ್ಚಲಾಯಿತು.
ಮಳೆಯಿಂದಾಗಿ ಆಟೋ ಕಸ ವಿಲೇವಾರಿ ಘಟಕದ ಹತ್ತಿರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಘಟಕದ ಕಾಮಗಾರಿಯು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಸ ವಿಲೇವಾರಿಯನ್ನು ಕ್ರಮಬದ್ಧವಾಗಿ ಘಟಕದ ಜಾಗಕ್ಕೆ ಸಾಗಾಟ ಮಾಡುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಸಂತೋಷ್ ತಿಳಿಸಿದರು.
- ಕೆ.ಕೆ. ನಾಗರಾಜಶೆಟ್ಟಿ.