ಮಡಿಕೇರಿ, ನ. ೨೨: ಗ್ರಾಮದ ಅಭಿವೃದ್ಧಿ ಮೂಲಕ ಗ್ರಾಮ ಪಂಚಾಯ್ತಿ ಸದಸ್ಯರು ಮತದಾರರ ಋಣ ತೀರಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ನಡೆದ ಜನಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನ ಸಂಘಟನೆ ಇತರ ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿ. ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಮೇಲುಗೈ ಇರುವುದು ವಿಶೇಷ. ಕಾರ್ಯಕರ್ತರನ್ನು ಯಾವುದೇ ಅಮಿಷ ಒಡ್ಡಿ ಖರೀದಿಸಲು ಯಾರಿಂದಲೂ ಆಗುವುದಿಲ್ಲ. ಕೋವಿಡ್ ನಿರ್ಮೂಲನೆಯಲ್ಲಿ ಭಾರತ ಪ್ರಥಮ, ಭಾರತದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು, ಕೋವಿಡ್ ನಿರ್ವಹಣೆ ಯಶಸ್ವಿಗೆ ಗ್ರಾ.ಪಂ. ಸದಸ್ಯರು ಮೂಲ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಜನಪರ ಸರಕಾರ: ನರೇಂದ್ರ ಮೋದಿ ಕಾರ್ಯವೈಖರಿ ಬಗ್ಗೆ ಇಡೀ ಪ್ರಪಂಚ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ಕೇಂದ್ರ ನಿರ್ವಹಿಸಿದೆ. ಲಸಿಕೆ ಬಗ್ಗೆ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕರು ನಂತರ ಲಸಿಕೆಗಾಗಿ ಸಾಲಿನಲ್ಲಿ ನಿಂತಿದ್ದರು. ಇದೀಗ ಲಸಿಕಾ ಅಭಿಯಾನ ೧೦೦ ಕೋಟಿ ಡೋಸ್ ದಾಟಿದೆ. ಉಚಿತ ಪಡಿತರ, ಲಸಿಕೆ ನೀಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಎಲ್ಲಾ ಸಮೀಕ್ಷೆಗಳಲ್ಲಿಯೂ ಮೋದಿ ನಾಯಕತ್ವ ಅಗ್ರಸ್ಥಾನದಲ್ಲಿದೆ. ಕೇಂದ್ರ ಜನಪರವಾಗಿ ನಡೆದುಕೊಳ್ಳುತ್ತಿದೆ. ಮೋದಿ ದೇಶದ ೮.೫೦ ಕೋಟಿ ಜನರ ಮನೆಗೆ ನೀರಿನ ಸೌಲಭ್ಯ ಕಲ್ಪಿಸಿದ್ದು, ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದಾರೆ. ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ೭೫೦ ಗ್ರಾ.ಪಂ. ಅನ್ನು ಅಮೃತ ಯೋಜನೆಗೆ ಗುರುತಿಸಿದ್ದಾರೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆಡಳಿತ ನಡೆಸುವ ಶಕ್ತಿ ಮಹಿಳೆಯರಿಗಿದೆ ಎಂದರು.
ಗೌರವಧನ ಹೆಚ್ಚಳದ ಭರವಸೆ
ಗ್ರಾ.ಪಂ. ಸದಸ್ಯರುಗಳು ಇತರ ಸದಸ್ಯರ ಮನಪರಿವರ್ತಿಸಿ ಎಂದು ಕರೆ ನೀಡಿದ ಅವರು, ಗ್ರಾ.ಪಂ ಸದಸ್ಯರ ಗೌರವಧನ ಹೆಚ್ಚಿಸುವ ಯೋಜನೆ ಇದೆ ಎಂದರು.
ಮಹತ್ವದ ಚುನಾವಣೆ - ಡಿ.ವಿ.ಎಸ್.
ಸಂಸದ ಡಿ.ವಿ. ಸದಾನಂದಗೌಡ ಮಾತನಾಡಿ, ವಿಧಾನ ಪರಿಷತ್ತು ಚುನಾಚಣೆ ಹಲವು ದೃಷ್ಟಿಕೋನದಲ್ಲಿ ಮಹತ್ವದ ಚುನಾವಣೆಯಾಗಿದೆ. ಸ್ವಾಭಿಮಾನಿ ಭಾರತ ನಿರ್ಮಾಣದ ಗುರಿ ಕೇಂದ್ರ ಸರಕಾರ ಹೊಂದಿದ್ದು ಅದನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪಂಚಾಯತ್ ರಾಜ್ ವ್ಯವಸ್ಥೆ
(ಮೊದಲ ಪುಟದಿಂದ) ಸಬಲೀಕರಣ ಮಾಡಲಾಗುತ್ತದೆ. ಸಶಕ್ತ ಗ್ರಾ.ಪಂ. ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಕ್ಷದಿಂದ ಕಾರ್ಯಚಟುವಟಿಕೆ ರೂಪಿಸಲಾಗುವುದು. ಆತ್ಮನಿರ್ಭರ್ ಪರಿಕಲ್ಪನೆ ನನಸಾಗಬೇಕು. ಈ ಯಾತ್ರೆ ಮೂಲಕ ಅದು ಈಡೇರುತ್ತದೆ. ವಿಧಾನ ಪರಿಷತ್ ಚಿಂತಕರ ಚಾವಡಿ ಎಂದು ಕರೆಯಲ್ಪಡುತ್ತದೆ. ವಿಧಾನಸಭೆಯಲ್ಲಿ ಕಾನೂನು ಅಂಗೀಕಾರವಾಗಬೇಕಾದರೆ ಮೊದಲು ಮೇಲ್ಮನೆಯಲ್ಲಿ ಅಂಗೀಕಾರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ೧೭ ಸ್ಥಾನ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸರಕಾರದ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಸ್ಥಳೀಯ ಸಂಸ್ಥೆ ಪಾತ್ರ ಅಪಾರವಾಗಿರುತ್ತದೆ. ಸುಜಾ ಕುಶಾಲಪ್ಪ ಕೂಡ ಅದೇ ರೀತಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಗೆಲುವು ನಿಶ್ಚಿತ - ಶೋಭಾ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದ ೨೦ ಕ್ಷೇತ್ರ ಗೆಲ್ಲುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತರಲಾಯಿತು. ಆದರೆ, ವಿಧಾನ ಪರಿಷತ್ತಿನಲ್ಲಿ ಬಹುಮತ ಇಲ್ಲದ ಹಿನ್ನೆಲೆ ತಡವಾಯಿತು. ಹಾಗಾಗಿ ಪರಿಷತ್ತಿನಲ್ಲಿ ಬಹುಮತ ಬೇಕು. ಕೊಡಗು ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲಿ ಗೆಲ್ಲುವ ವಾತಾವರಣವಿದೆ. ಕಾಂಗ್ರೆಸ್ ಸ್ಥಿತಿ ಇದೀಗ ಬದಲಾಗಿದೆ. ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿ ಕೆಡವಿ ಇದೀಗ ಅಭ್ಯರ್ಥಿ ಇಲ್ಲದ ಮಟ್ಟಿಗೆ ಕುಸಿದಿದೆ. ಇದಕ್ಕೆ ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಜನವಿರೋಧಿ ಆಡಳಿತ ಕಾರಣವಾಗಿವೆ. ಕೊಡಗು ಸಂಘಟನಾತ್ಮಕ ಜಿಲ್ಲೆಯಾಗಿದೆ. ಸುಜಾ ಕುಶಾಲಪ್ಪ ಅವರಿಗೆ ಈ ಬಾರಿ ಅವಕಾಶ ದೊರೆತಿದೆ. ಅವರ ಗೆಲುವಿಗೆ ಶ್ರಮಿಸಿ ಎಂದರು.
ಸಾಲಮನ್ನಾ ಪ್ರಕ್ರಿಯೆಯಲ್ಲಿ - ಸೋಮಶೇಖರ್
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ವಿಧಾನಸೌಧದಲ್ಲಿ ಕೊಡಗಿನ ಶಾಸಕರ ಗಟ್ಟಿ ಧ್ವನಿ ಇದೆ. ವಿಧಾನಪರಿಷತ್ತಿನಲ್ಲಿಯೂ ಅರ್ಹ ಅಭ್ಯರ್ಥಿ ಚುನಾಯಿತರಾಗಬೇಕು. ಸುಜಾ ಕುಶಾಲಪ್ಪ ಸರಿಯಾದ ಅಭ್ಯರ್ಥಿಯಾಗಿದ್ದು, ಗ್ರಾ.ಪಂ. ಸದಸ್ಯರುಗಳು ಉತ್ಸುಕತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಡಿ.ಸಿ.ಸಿ. ಬ್ಯಾಂಕ್ನಲ್ಲಿ ಪಡೆದ ಸಾಲಮನ್ನಾಕ್ಕೆ ಕ್ರಮವಹಿಸಲಾಗಿದ್ದು, ೧೬,೭೫೦ ಕೋಟಿ ಹಣವನ್ನು ರೈತರಿಗೆ ಸಾಲದ ರೂಪದಲ್ಲಿ ನೀಡಲಾಗಿದೆ. ೩೪ ಸಾವಿರಕ್ಕೂ ಹೆಚ್ಚಿನ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗಿದೆ. ಕೊಡಗು ಡಿ.ಸಿ.ಸಿ. ಬ್ಯಾಂಕ್ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೇ ೨ನೇ ಹಂತದ ಕಂತು ಸಾಲಮನ್ನಾ ಯೋಜನೆಗೆ ರೂ ೧೯೫ ಕೋಟಿ ಆರ್ಥಿಕ ಇಲಾಖೆ ಮೂಲಕ ಬಿಡುಗಡೆಯಾಗಬೇಕಾಗಿದ್ದು, ೧೦ ಸಾವಿರ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿವೆ. ಇದರಲ್ಲಿ ಕೊಡಗಿನ ರೈತರು ಒಳಗೊಂಡಿದ್ದಾರೆ ಎಂದರು.
ಮೀನುಗಾರಿಕೆ ಸಚಿವ ಎಸ್. ಅಂಗಾರ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಯಾವ ಸರಕಾರ ಯೋಚಿಸಿರಲಿಲ್ಲ. ನರೇಂದ್ರ ಮೋದಿ ಜನ್ಧನ್ ಖಾತೆ ತರುವ ಮೂಲಕ ಸರಕಾರದ ಸವಲತ್ತನ್ನು ನೇರವಾಗಿ ತಲುಪಿಸುವ ಫಲವಾಗಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದರು.
ಗೌರವ ಧನ ಹೆಚ್ಚಳಕ್ಕೆ ರಂಜನ್ ಒತ್ತಾಯ
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳಿಲ್ಲದೆ ಆಮದು ಮಾಡಿಕೊಳ್ಳುತ್ತಿರುವುದು ಅವರ ದುಸ್ಥಿತಿಯನ್ನು ಪ್ರದರ್ಶಿಸುತ್ತಿದೆ. ಮುಂದಿನ ದಿನದಲ್ಲಿ ವಿಧಾನಸಭೆಗೂ ಸ್ಪರ್ಧಿಸಲು ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳಿರುವುದಿಲ್ಲ. ಬಿಜೆಪಿ ಬೆಂಬಲಿತ ಎಸ್ಸಿ, ಎಸ್ಟಿ ಗ್ರಾ.ಪಂ. ಸದಸ್ಯರು ಹೆಚ್ಚಿದ್ದಾರೆ. ಕೇಂದ್ರ ಸರಕಾರ ನುಡಿದಂತೆ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ. ಗ್ರಾ.ಪಂ. ಸದಸ್ಯರಿಗೆ ಗೌರವಧನ ಹೆಚ್ಚಿಸಬೇಕಿದೆ ಎಂದು ಒತ್ತಾಯಿಸಿದರು.
ಬೆಳೆ ಮರುಸಮೀಕ್ಷೆಗೆ ಬೋಪಯ್ಯ ಮನವಿ
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಅಕಾಲಿಕ ಮಳೆಯಿಂದ ಕಾಫಿ, ಭತ್ತ, ಅಡಿಕೆ ಬೆಳೆ ನಾಶವಾಗಿವೆ. ಕಾಫಿಮಂಡಳಿ ಸರ್ವೆ ನಡೆಸಿ ಶೇ. ೩೩% ಎಂದು ವರದಿ ನೀಡಿದ್ದು, ಇದರಿಂದ ಪರಿಹಾರ ದೊರೆತಿಲ್ಲ. ಹೀಗಾಗಿ ಮರುಸಮೀಕ್ಷೆ ನಡೆಸಬೇಕು. ಸ್ಪಷ್ಟ ಮಾಹಿತಿ ನೀಡಲು ಸೂಚಿಸಬೇಕೆಂದು ಮನವಿ ಮಾಡಿದರು.
ಅನಿರೀಕ್ಷಿತ ಅವಕಾಶದ ಬಳಕೆ - ಸುನಿಲ್
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ, ಕಳೆದ ಬಾರಿ ಅನಿರೀಕ್ಷಿತ ಅವಕಾಶ ದೊರೆತಿತ್ತು. ದೊರೆತ ಅವಕಾಶವನ್ನು ಬಳಸಿಕೊಂಡಿದ್ದೇನೆ. ಕೊಡಗಿನಲ್ಲಿ ಮಳೆ ಸಂದರ್ಭ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉತ್ತಮ ಸ್ಪಂದನ ನೀಡಿದ್ದರು. ಅಂದಿನ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಳೆಗಾಲದಲ್ಲಿ ಪೂರ್ಣ ಜವಾಬ್ದಾರಿ ನೀಡಿದ್ದರು. ಯಾವುದೇ ವಿವಾದಕ್ಕೆ ಒಳಗಾಗದೆ ಶಾಸಕರೊಂದಿಗೆ ಸಮನ್ವಯತೆ ಕಾಯ್ದುಕೊಂಡು ಕೆಲಸ ಮಾಡಿದ್ದೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ನಾಲ್ಕು ತಂಡ ರಚಿಸಿ ಕಾರ್ಯಕರ್ತರಲ್ಲಿ ಶಕ್ತಿ ತುಂಬಿಸುವ ಕೆಲಸ ಜನಸ್ವರಾಜ್ ಕಾರ್ಯಕ್ರಮ ಮೂಲಕ ಆಗುತ್ತಿದೆ. ನಗರಸಭೆಯಲ್ಲಿಯೂ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ೧೩೪೪ ಮತದಾರರ ಪೈಕಿ ಬಿಜೆಪಿ ಬೆಂಬಲಿತ ೮೩೭ ಸದಸ್ಯರಿದ್ದಾರೆ. ಮುಂದಿನ ದಿನದಲ್ಲಿ ಬಿಜೆಪಿ ಎದುರು ಸ್ಪರ್ಧಿಸಲು ಇತರ ಪಕ್ಷಗಳು ಭಯಪಡುವ ಪರಿಸ್ಥಿತಿ ಸೃಷ್ಟಿಯಾಗುವುದು ಖಚಿತ ಎಂದರು.
ಅಭ್ಯರ್ಥಿ ಸುಜಾಕುಶಾಲಪ್ಪ ಮಾತನಾಡಿ, ೪೩ ವರ್ಷಗಳಿಂದ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿರುವುದನ್ನು ಗುರುತಿಸಿ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ. ಜನಪರವಾಗಿ ಅಧಿಕಾರ ನಡೆಸುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಪಕ್ಷದ ರಾಜ್ಯ ವಕ್ತಾರ ಅಶ್ವತ್ ನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ, ಮಂಗಳೂರು ಪ್ರಬಾರಿ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಸ್ತುವಾರಿ ರಮೇಶ್, ಪ್ರಮುಖರಾದ ಎಸ್.ಜಿ. ಮೇದಪ್ಪ, ಭಾರತೀಶ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.