ಸೋಮವಾರಪೇಟೆ, ನ.೨೨: ಕೊಡಗು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಈಗಾಗಲೇ ೫ ಸಾವಿರ ಕೋಟಿಗೂ ಅಧಿಕ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದ್ದು, ಸಂತ್ರಸ್ಥರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮ ಪರವಾಗಿ ರಾಜ್ಯ ಸರ್ಕಾರ ನಿಂತಿದ್ದು, ಕೇಂದ್ರದ ನೆರವಿಗೂ ಮುನ್ನವೇ ರಾಜ್ಯ ಸರ್ಕಾರ ಪರಿಹಾರ ನೀಡುತ್ತದೆ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖಾ ಸಚಿವ ಆರ್. ಅಶೋಕ್ ಭರವಸೆ ನೀಡಿದರು. ಅಕಾಲಿಕ ಮಳೆಯಿಂದ ಹಾನಿಗೀಡಾಗಿರುವ ಸಮೀಪದ ಬೇಳೂರು ಗ್ರಾಮದ ಕಾಫಿ ತೋಟಗಳನ್ನು ಪರಿಶೀಲನೆ ನಡೆಸಿದ ನಂತರ, ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ ಸಚಿವರು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೊಡಗಿನಲ್ಲಿ ಅತಿವೃಷ್ಟಿಯಿಂದಾಗಿ ೧೨೭ ಕೋಟಿಗೂ ಅಧಿಕ ಹಾನಿ ಸಂಭವಿಸಿರುವ ಬಗ್ಗೆ ವರದಿ ನೀಡಲಾಗಿದೆ. ಇತ್ತೀಚಿನ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಅಕಾಲಿಕ ಮಳೆ ಬೀಳುತ್ತಿದ್ದು, ಕಾಫಿ ಸೇರಿದಂತೆ ಕೃಷಿ ನಷ್ಟವಾಗಿದೆ. ಈ ಹಿನ್ನೆಲೆ ತಕ್ಷಣದಿಂದಲೇ ಮರು ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸಂಬAಧಿಸಿದ ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರ್. ಅಶೋಕ್ ತಿಳಿಸಿದರು.
ಕೊಡಗಿನಲ್ಲಿ ಪ್ರಸಕ್ತ ವರ್ಷ ೩ ಪ್ರಾಣ ಹಾನಿ, ೨೨ ಜಾನುವಾರು ಹಾನಿ, ೧೦ ಕೊಟ್ಟಿಗೆ
(ಮೊದಲ ಪುಟದಿಂದ) ಸೇರಿದಂತೆ ೪೦,೮೭೮ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಮತ್ತು ಕೃಷಿಗೆ ಹಾನಿಯಾಗಿದೆ. ಇದರಲ್ಲಿ ೩೮,೫೦೦ ಹೆಕ್ಟೇರ್ ಕಾಫಿ ಹಾನಿಯಾಗಿದೆ. ಈಗಿನ ಅಕಾಲಿಕ ಮಳೆಯಿಂದ ಮತ್ತೆ ಫಸಲು ನಷ್ಟ ಸಂಭವಿಸಿದ್ದು, ಹಲವು ಕಡೆಗಳಲ್ಲಿ ಕಾಫಿ ನೆಲಕ್ಕಚ್ಚಿದ್ದರೆ, ಇನ್ನು ಕೆಲವು ಪ್ರದೇಶದಲ್ಲಿ ಗಿಡಗಳಲ್ಲಿಯೇ ಕಾಫಿ ಕೊಳೆಯುತ್ತಿದೆ. ಈ ಹಿನ್ನೆಲೆ ಮತ್ತೊಮ್ಮೆ ಸರ್ವೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ಹಿಂದೆ ಶೇ.೩೦ರಷ್ಟು ಮಾತ್ರ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದರು. ಆದರೆ ವಾಸ್ತವಾಂಶ ಬೇರೆ ಇದೆ. ಈ ಹಿನ್ನೆಲೆ ಇಂದು ಖುದ್ದು ಕಾಫಿ ತೋಟಗಳನ್ನು ಪರಿಶೀಲನೆ ನಡೆಸಿದ್ದು, ಗರಿಷ್ಠ ಪ್ರಮಾಣದಲ್ಲಿ ಹಾನಿಯಾಗಿದೆ. ಅಧಿಕಾರಿಗಳು ಶೇ.೩೦ಕ್ಕಿಂತ ಅಧಿಕ ನಷ್ಟದ ವರದಿ ನೀಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿಖರ ಸರ್ವೆ ನಡೆಸುವಂತೆ ಖಡಕ್ಕಾಗಿ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಇದರೊಂದಿಗೆ ಜಿಲ್ಲೆಯಲ್ಲಿ ೪೦ ಕಿ.ಮೀ.ಗೂ ಅಧಿಕ ರಾಜ್ಯ ಹೆದ್ದಾರಿ ಹಾನಿಗೀಡಾಗಿದೆ. ೮ ಸೇತುವೆ ದುರಸ್ತಿಗೊಂಡಿದೆ. ೧೫೦೦ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಜಿಲ್ಲಾ ಪಂಚಾಯಿತಿಗೆ ಸೇರಿದ ೩ ಸಾವಿರ ಕಿ.ಮೀ. ಗೂ ಅಧಿಕ ರಸ್ತೆ ಹಾನಿಗೀಡಾಗಿದೆ. ಇವುಗಳೆಲ್ಲವನ್ನೂ ಸರ್ಕಾರದ ವತಿಯಿಂದಲೇ ದುರಸ್ತಿ ಪಡಿಸಲಾಗುತ್ತಿದೆ ಎಂದರು.
ಈಗಾಗಲೇ ಪರಿಹಾರ ಕಾರ್ಯಕ್ಕಾಗಿ ೧೩೦ ಕೋಟಿ ಬಿಡುಗಡೆ ಮಾಡಲಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಹೆಚ್ಚುವರಿಯಾಗಿ ೫೮ ಕೋಟಿ ಬಿಡುಗಡೆ ಮಾಡಲಾಗುವುದು. ಮುಂದಿನ ೧೫ ದಿನಗಳ ಒಳಗೆ ವರದಿ ಸಲ್ಲಿಸುವಂತೆ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಮನೆ ಹಾನಿಗೆ ಸಂಬAಧಿಸಿದAತೆ ರಾಜ್ಯ ಸರ್ಕಾರದಿಂದ ತಕ್ಷಣ ೧ ಲಕ್ಷ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ೯೫ ಸಾವಿರ ನೀಡಲಿದ್ದು, ಉಳಿದ ೪.೫ ಲಕ್ಷ ಹಣವನ್ನು ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ಭರಿಸುತ್ತಿದೆ. ಮನೆಗಳಿಗೆ ನೀರು ನುಗ್ಗಿದರೆ ರಾಜ್ಯ ಸರ್ಕಾರ ೭,೨೦೦ ಹಾಗೂ ಕೇಂದ್ರ ಸರ್ಕಾರ ೨,೮೦೦ ನೀಡಲಿದೆ. ಆದಾಗ್ಯೂ ಕೇಂದ್ರದ ಪರಿಹಾರಕ್ಕಾಗಿ ಕಾಯದೇ ರಾಜ್ಯ ಸರ್ಕಾರವೇ ತಕ್ಷಣ ಪರಿಹಾರ ನೀಡುತ್ತಿದೆ ಎಂದರು.
ಕೇAದ್ರ ಸರ್ಕಾರದಿಂದ ಅಗತ್ಯ ನೆರವು ಲಭಿಸುತ್ತಿದೆ. ಸಂಕಷ್ಟದ ಸಮಯದಲ್ಲಿ ಕೇಳಿದ ತಕ್ಷಣ ಹೆಲಿಕಾಪ್ಟರ್ ಹಾಗೂ ಸಿಬ್ಬಂದಿಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಈ ಬಾರಿ ಹೆಚ್ಚು ಬೆಳೆಹಾನಿಯಾಗಿದ್ದು, ನ್ಯಾಯಯುತ ಪರಿಹಾರ ವಿತರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸರ್ಕಾರದ ಬೊಕ್ಕಸಕ್ಕೆ ಎಷ್ಟೇ ಹೊರೆಯಾದರೂ ಸಹ ರೈತರ ಪರವಾಗಿ ಸರ್ಕಾರ ನಿಲ್ಲಲಿದೆ ಎಂದು ಅಶೋಕ್ ಹೇಳಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್‌ಕುಮಾರ್ ಖಂಡು, ತಹಶೀಲ್ದಾರ್ ಆರ್. ಗೋವಿಂದ ರಾಜು ಸೇರಿದಂತೆ ವಿವಿಧ ಇಲಾಖಾದಿ üಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸ್ಥಳೀಯ ರೈತರು, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ತಾಲೂಕು ವ್ಯಾಪ್ತಿಯಲ್ಲಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಜೋಳ- ಶುಂಠಿ ಪರಿಶೀಲನೆ
ಕೂಡಿಗೆ : ಇದಕ್ಕೂ ಮುನ್ನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರೂರು ಗ್ರಾಮದ ಪ್ರಕಾಶ್ ಎಂಬವರಿಗೆ ಸೇರಿದ ಎರಡೂ ಎಕರೆಗಳಷ್ಟು ಪ್ರದೇಶದಲ್ಲಿ ಮಳೆಯಿಂದಾಗಿ ಜೋಳದ ಬೆಳೆ ಹಾಳಾಗಿರುವುದನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಚಿನ್ನೇನಹಳ್ಳಿಯ ಕುಮಾರ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಮಳೆಯಿಂದಾಗಿ ಶುಂಠಿ ಬೆಳೆಗೆ ಕೂಳೆ ರೋಗ ಬಂದಿರುವುದನ್ನು ಅವರ ಗದ್ದೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಜೋಳ ಮತ್ತು ಶುಂಠಿ ಬೆಳೆ ಹಾಳಾಗಿರುವ ವಿಸ್ತೀರ್ಣದ ಮಾಹಿತಿಯನ್ನು ಪಡೆದು ೧೫ ದಿನಗಳ ಒಳಗೆ ಪರಿಹಾರವನ್ನು ನೀಡಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರೈತರಿಗೆ ತಿಳಿಸಿದರು.
ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ, ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನು ಪಡೆದರು.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಚುನಾವಣಾ ಆಯೋಗ ಅನುಮತಿ ಮೇರೆಗೆ ಇಂದು ಕೊಡಗು ಜಿಲ್ಲೆಗೆ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅತೀ ಶೀಘ್ರದಲ್ಲಿ ಪರಿಹಾರವನ್ನು ನೀಡಲು ಸ್ಥಳ ಪರಿಶೀಲನೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಜೋಳ, ಶುಂಠಿ, ಕಾಫಿ ಬೆಳೆಗಳು ಹಾಳಾಗಿದ್ದು, ಆ ಸ್ಧಳಕ್ಕೆ ಸಂಬAಧಿಸಿದ ಅಧಿಕಾರಿಗಳು ಭೇಟಿ ನೀಡಿ ರೈತರಿಂದ ಮಾಹಿತಿಯನ್ನು ಪಡೆದು, ಪರಿಶೀಲನೆ ನಡೆಸಿ ಅವರ ಜಾಗದಿಂದಲೇ ಅಪ್‌ಲೋಡ್ ಮಾಡಿ ಬೆಳೆ ಹಾನಿಯಾದಷ್ಟು ಪರಿಹಾರವನ್ನು ೧೫ ದಿನಗಳ ಒಳಗೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ೭೦೦ ಕೋಟಿ ಹಣ ಇದೆ. ಅದನ್ನು ಬಳಕೆ ಮಾಡುವ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು. ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಮೊದಲ ಹಂತವಾಗಿ ಒಂದು ಲಕ್ಷದಷ್ಟು ಹಣವನ್ನು ನೀಡಲಾಗುವುದು. ನಂತರ ಸಂಪೂರ್ಣ ಮಾಹಿತಿ ಆಧಾರದ ಮೇಲೆ ಮೂರು ಲಕ್ಷದವರೆಗೆ ಪರಿಹಾರವನ್ನು ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಭÀಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಜ ಮೊಗವೀರ, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜ್, ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಉಪ ತಹಶೀಲ್ದಾರ್ ಮಧುಸೂದನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀನಿವಾಸ, ಮಂಜುಳ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ್ ನಾಯಕ್, ಜಯಮ್ಮ ಮಂಜುನಾಥ, ಪ್ರವೀಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.
-ವಿಜಯ್ ಹಾನಗಲ್, ಕೆ.ಕೆ. ನಾಗರಾಜಶೆಟ್ಟಿ.