ಬೆಂಗಳೂರಿನಲ್ಲಿ ಮಳೆಹಾನಿಗೆ ಪರಿಹಾರ ಘೋಷಣೆ
ಬೆಂಗಳೂರು, ನ. ೨೩: ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ನೀರು ನುಗ್ಗಿರುವ ಮನೆಗಳಿಗೆ ರೂ. ೧೦ ಸಾವಿರ, ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ ರೂ. ೫ ಲಕ್ಷ ಹಾಗೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವ ಮನೆಗಳಿಗೆ ರೂ. ೧ ಲಕ್ಷ ತುರ್ತು ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇಂದು ಬೆಳಗ್ಗೆ ಜಲಾವೃತವಾಗಿರುವ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಸಮುಚ್ಚಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನೀರು ನುಗ್ಗಿರುವ ಮನೆಗಳಿಗೆ ೧೦ ಸಾವಿರ ರೂ.ಗಳನ್ನು ಇಂದೇ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದರು. ಯಲಹಂಕ ಪ್ರದೇಶದಲ್ಲಿ ೪೦೦ ಮನೆಗಳಿಗೆ ಹಾನಿಯಾಗಿದೆ. ೧೦ ಕಿ.ಮೀ. ಮುಖ್ಯರಸ್ತೆ, ೨೦ ಕಿ.ಮೀ. ಇತರೆ ರಸ್ತೆಗಳು ಹಾನಿಯಾಗಿದೆ. ಮೂಲಭೂತ ಸೌಕರ್ಯಗಳ ದುರಸ್ತಿಗೆ ಅಗತ್ಯವಿರುವ ಅನುದಾನದ ಅಂದಾಜು ಮಾಡಲು ಸೂಚನೆ ನೀಡಿದ್ದು, ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. ಬೆಂಗಳೂರಿನಲ್ಲಿ ರಾಜಕಾಲುವೆಗಳ ಸಮಸ್ಯೆ ಇದ್ದು, ೫೦ ಕಿ.ಮೀ. ರಾಜಕಾಲುವೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಇನ್ನೂ ೫೦ ಕಿ.ಮೀ.ಗೆ ಹೆಚ್ಚಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂದು ಮತ್ತೊಮ್ಮೆ ಸಭೆ ಕರೆದು ಎಲ್ಲೆಲ್ಲಿ ರಾಜಕಾಲುವೆ ಸಣ್ಣದಿದ್ದು, ಅಡಚಣೆ ಇದೆ ಅಲ್ಲಿ ಶಾಶ್ವತ ಪರಿಹಾರ ಕೈಗೊಳ್ಳಲು ತೀರ್ಮಾನಿಸಿ, ಅಗತ್ಯ ಅನುದಾನದ ವ್ಯವಸ್ಥೆ ಮಾಡಲಾಗುವುದು ಎಂದರು. ಮಳೆ ನಿಂತ ಕೂಡಲೇ ಬಿಬಿಎಂಪಿ ವತಿಯಿಂದ ರಾಜಕಾಲುವೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಡಚಣೆ ಇರುವಲ್ಲಿ ಆ ಸ್ಥಳದ ಮಾಲೀಕರ ಬಳಿ ಮಾತನಾಡಿ, ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಎಂಟು ಅಡಿಯಿರುವ ರಾಜಕಾಲುವೆಯನ್ನು ೩೦ ಅಡಿಗಳಿಗೆ ಹೆಚ್ಚಿಸಬೇಕು. ಮತ್ತು ೨ ರಾಜಕಾಲುವೆಗಳಿಗೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.
ಕೃಷಿ ಕಾನೂನು ಬಗ್ಗೆ ವರದಿ ಶೀಘ್ರ ಬಿಡುಗಡೆ ಮಾಡಲು ಪತ್ರ
ನವದೆಹಲಿ, ನ. ೨೩: ಕೃಷಿ ಕಾನೂನುಗಳ ಕುರಿತು ನಾವು ನೀಡಿರುವ ವರದಿಯನ್ನು ಶೀಘ್ರವಾಗಿ ಬಹಿರಂಗಪಡಿಸಬೇಕು ಅಥವಾ ಆ ಅಧಿಕಾರವನ್ನು ಸಮಿತಿಗೆ ನೀಡಬೇಕು ಎಂದು ಮೂರು ಕೃಷಿ ಕಾಯ್ದೆಗಳ ಪರಾಮರ್ಶೆಗೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಅನಿಲ್ ಘನವತ್ ಅವರು ಮಂಗಳವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಶೆಟ್ಕರಿ ಸಂಘಟನೆಯ ಹಿರಿಯ ನಾಯಕರಾಗಿರುವ ಘನವತ್ ಅವರು ಪ್ರತೇಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರವೂ ಅಗತ್ಯ ಕೃಷಿ ಸುಧಾರಣೆಗಳಿಗೆ ಒತ್ತಾಯಿಸಿ ಮುಂದಿನ ಎರಡು ತಿಂಗಳಲ್ಲಿ ಒಂದು ಲಕ್ಷ ರೈತರನ್ನು ಸಂಘಟಿಸಿ ದೆಹಲಿಗೆ ಕರೆತರುವುದಾಗಿ ಹೇಳಿದ್ದಾರೆ. ಕನಿಷ್ಟ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಗ್ಯಾರಂಟಿ ಮಾಡಲು ಮತ್ತು ಎಂಎಸ್ಪಿಯಲ್ಲಿ ಎಲ್ಲಾ ಕೃಷಿ-ಬೆಳೆಗಳ ಖರೀದಿಯನ್ನು ಖಚಿತಪಡಿಸಿಕೊಳ್ಳುವ ಪ್ರತಿಭಟನಾನಿರತ ರೈತರ ಬೇಡಿಕೆಯು ಕಾರ್ಯಸಾಧ್ಯವಲ್ಲ ಮತ್ತು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ತಾ. ೨೩ ರಂದು ಸಿಜೆಐ ಎನ್.ವಿ. ರಮಣ ಅವರಿಗೆ ಬರೆದ ಪತ್ರದಲ್ಲಿ, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ನಂತರ, ಸುಪ್ರೀಂ ನೇಮಿತ ಸಮಿತಿಯ ವರದಿಯು ಅಪ್ರಸ್ತುತವಾಗಲಿದೆ. ಆದರೆ ಸಮಿತಿಯ ಶಿಫಾರಸುಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎಂದಿದ್ದಾರೆ.
ಕರ್ನಲ್ ಸಂತೋಷ್ ಬಾಬುಗೆ ಮರಣೋತ್ತರ ‘ಮಹಾವೀರ ಚಕ್ರ' ಪದಕ
ನವದೆಹಲಿ, ನ. ೨೩: ಕಳೆದ ವರ್ಷ ಜೂನ್ನಲ್ಲಿ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಯೋಧರ ಸಂಘರ್ಷದಲ್ಲಿ ಹುತಾತ್ಮರಾದ ೧೬ನೇ ಬಿಹಾರ ಬೆಟಾಲಿಯನ್ನ ಕಮಾಂಡಿAಗ್ ಆಫೀಸರ್ ಆಗಿದ್ದ ಸಂತೋಷ್ ಬಾಬು ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಎರಡನೇ ಅತಿ ದೊಡ್ಡ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ನೀಡಿ ಗೌರವಿಸಿದೆ. ರಾಷ್ಟçಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರಿಂದ ಬಾಬು ಪತ್ನಿ ಬಿ. ಸಂತೋಷಿ ಮತ್ತು ತಾಯಿ ಮಂಜುಳಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಹಾವೀರ ಚಕ್ರ ಪರಮ್ ವೀರ ಚಕ್ರ ನಂತರ ಎರಡನೇ ಅತಿ ದೊಡ್ಡ ಶೌರ್ಯ ಪ್ರಶಸ್ತಿಯಾಗಿದೆ. ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಇತರ ನಾಲ್ವರು ಯೋಧರಾದ ನಾಯಿಬ್ ಸುಬೇದಾರ್ ನುದುರಾಮ್ ಸೊರೆನ್, ಹವಾಲ್ದಾರ್ (ಗನ್ನರ್) ಕೆ. ಪಳನಿ, ನಾಯಕ್ ದೀಪಕ್ ಸಿಂಗ್ ಮತ್ತು ಸಿಪಾಯಿ ಗುರ್ತೇಜ್ ಸಿಂಗ್ ಅವರಿಗೆ ಮರಣೋತ್ತರವಾಗಿ ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನೆಯ ಭಾಗವಾಗಿದ್ದ ಮತ್ತು ಯುದ್ಧದಲ್ಲಿ ಬದುಕುಳಿದ ೩ ಮಧ್ಯಮ ರೆಜಿಮೆಂಟ್ನ ಹವಾಲ್ದಾರ್ ತೇಜಿಂದರ್ ಸಿಂಗ್ ಅವರಿಗೂ ವೀರಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ. ವೀರಚಕ್ರ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ೨೦ ಭಾರತೀಯ ಸೇನಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇದು ದಶಕಗಳಲ್ಲಿ ಉಭಯ ರಾಷ್ಟçಗಳ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು.
ತಾ. ೨೭ ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ
ಬೆಂಗಳೂರು, ನ. ೨೩: ಮುಂದಿನ ನಾಲ್ಕು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಇನ್ನೂ ೨ ದಿನ ಸಾಧಾರಣ ಮಳೆ; ಅಲ್ಲಲ್ಲಿ ಮೋಡ ಕವಿದ ವಾತಾವರಣ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಸೋಮವಾರವೂ ಬಹುತೇಕ ಜಿಲ್ಲೆಗಳಲ್ಲಿ ಕಡಿಮೆಯಾಗಿದೆ. ಆದರೆ ಮಳೆ ಹಾನಿ ಮಾತ್ರ ಮುಂದುವರಿಯುವುದರೊAದಿಗೆ ಅಸ್ತವ್ಯಸ್ತವಾಗಿರುವ ಜನಜೀವನ ಸಹಜಸ್ಥಿತಿಗೆ ಮರಳಲು ವಿಳಂಬವಾಗಿದೆ. ರಕ್ಷಣಾ ಕಾರ್ಯಗಳು ಮುಂದುವರಿದಿವೆ.
ಬೆAಗಳೂರು ವಿಮಾನ ನಿಲ್ದಾಣದಲ್ಲಿ ೩ ಕೆ.ಜಿ. ಚಿನ್ನ ವಶ
ಬೆಂಗಳೂರು, ನ. ೨೩: ಕೊಲಂಬೊದಿAದ ಎಂಟು ಮಹಿಳೆಯರು ಸೇರಿದಂತೆ ಹತ್ತು ಸದಸ್ಯರ ಗ್ಯಾಂಗ್ ತಮ್ಮ ದೇಹದಲ್ಲಿ ಸುಮಾರು ೩ ಕೆ.ಜಿ. ಚಿನ್ನವನ್ನು ಬಚ್ಚಿಟ್ಟುಕೊಂಡು ಬೆಂಗಳೂರಿಗೆ ಕಳ್ಳ ಸಾಗಣೆ ಮಾಡಲು ನಡೆಸಿದ ಯತ್ನವನ್ನು ಏರ್ಪೋರ್ಟ್ ಕಸ್ಟಮ್ಸ್ನ ಏರ್ ಇಂಟೆಲಿಜೆನ್ಸ್ ಯುನಿಟ್ ವಿಫಲಗೊಳಿಸಿದೆ. ಪ್ರಯಾಣಿಕರ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟ ಚಿನ್ನದ ಒಟ್ಟು ಮೌಲ್ಯ ಸುಮಾರು ರೂ. ೧.೫೨ ಕೋಟಿ ಆಗಿದೆ. ತಾ. ೨೦ ರ ರಾತ್ರಿ ಸುಮಾರು ೧೦.೩೦ಕ್ಕೆ ಶ್ರೀಲಂಕಾ ಏರ್ಲೈನ್ಸ್ನಿಂದ ಬೆಂಗಳೂರಿನ ಕೆಂಪೇಗೌಡ ಅಂರ್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ತಂಡದ ಅನುಮಾನಾಸ್ಪದ ವರ್ತನೆ ಮೇರೆಗೆ ಪರಿಶೀಲಿಸಿ ಅವರಿಂದ ಒಟ್ಟು ೩೦೬೬.೫೫ ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ಹೇಳಿವೆ. ಕೋವಿಡ್ನಿಂದಾಗಿ ಭಾರತ ಮತ್ತು ಶ್ರೀಲಂಕಾ ನಡುವೆ ವಿಮಾನಗಳು ಕಾರ್ಯನಿರ್ವಹಿಸದ ಕಾರಣ, ದ್ವೀಪ ರಾಷ್ಟçದಿಂದ ಚಿನ್ನದ ಕಳ್ಳಸಾಗಣೆ ತಾತ್ಕಾಲಿಕವಾಗಿ ನಿಂತಿತ್ತು. ಕೋವಿಡ್ಗೆ ಮುಂಚಿತವಾಗಿ ಕಳ್ಳಸಾಗಣೆಯು ಆಗಾಗ್ಗೆ ನಡೆಯುತ್ತಿತ್ತು ಮತ್ತು ಈಗ ವಿಮಾನಗಳ ಪುನರಾರಂಭದೊAದಿಗೆ ಇದು ಪುನರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.