ಶನಿವಾರಸಂತೆ, ನ. ೨೧: ಪಟ್ಟಣದಲ್ಲಿ ಇತ್ತೀಚೆಗೆ ನಡೆದಂತಹ ಅಹಿತಕರ ಘಟನೆಗೆ ಒಳಗಾದ ಕೊಡ್ಲಿಪೇಟೆ ಹಾಗೂ ಬ್ಯಾಡಗೊಟ್ಟ ಗ್ರಾಮಗಳ ಕಾಲೇಜು ವಿದ್ಯಾರ್ಥಿನಿಯರ ಮನೆಗಳಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಪಕ್ಷದ ಮುಖಂಡರು ಭೇಟಿ ನೀಡಿ ಮಾಹಿತಿ ಪಡೆದು ಸಾಂತ್ವನ ಹೇಳಿದರು.
ನಂತರ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಸದಾ ತೊಂದರೆಗೀಡಾದವರ ಪರ ಇದ್ದು, ಅವರಿಗೆ ಬೇಕಾದ ನೆರವನ್ನು ನೀಡಲು ಸಿದ್ಧವಿದೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಶಾಂತಿ ಹಾಗೂ ಸೌಹಾರ್ಧಯುತ ಬದುಕು ನಡೆಸುವ ನಿಟ್ಟಿನಲ್ಲಿ ಇಂತಹ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಮನವಿ ಮಾಡಿದರು.
ನಂತರ ಕಾಂಗ್ರೆಸ್ ಮುಖಂಡರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಅವರೊಂದಿಗೆ ಚರ್ಚಿಸಿದರು. ಕೊಡಗಿನಲ್ಲಿ ಕೋಮು ಸಾಮರಸ್ಯ ಕದಡುತ್ತಿರುವವರ ವಿರುದ್ಧ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಂಡು ಅಹಿತಕರ ಘಟನೆಗಳಿಗೆ ಸಂಪೂರ್ಣ ವಿರಾಮ ಹಾಕಬೇಕು. ಅಮಾಯಕ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ವರ್ತಿಸಿ ಭಯ ಹುಟ್ಟಿಸಿದ ಹೀನಕೃತ್ಯ ಅತ್ಯಂತ ಖಂಡನೀಯ. ಕಾಂಗ್ರೆಸ್ ಪಕ್ಷ ಇಂತಹ ದುರ್ನಡತೆ ಸಹಿಸುವುದಿಲ್ಲ. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾಡಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಕಾಂಗ್ರೆಸ್ ಪಕ್ಷ ಸದಾ ಕೈಜೋಡಿಸುತ್ತದೆ ಎಂದರು.
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ, ಮುಖಂಡರಾದ ಅಬ್ದುಲ್ ರೆಹಮಾನ್, ಮುನೀರ್ ಅಹಮ್ಮದ್, ಔರಂಗ್ಜೇಬ್, ಯಶ್ ಗೌಡ ದೋಲ್ಪಾಡಿ, ನಾಪಂಡ ರವಿ, ರಂಜಿತ್, ರವಿಗೌಡಳ್ಳಿ, ಕಿರಣ್, ದೇವಿಪ್ರಸಾದ್, ರತನ್ ಇತರರು ಉಪಸ್ಥಿತರಿದ್ದರು.