ಆದಿ ಕೊಡವ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವಿಧಿವಶರಾಗಿ ಇಂದಿಗೆ ೭೭ ವರ್ಷಗಳು ಸಂದಿವೆ. ಕಿರುಂದಾಡು ಗ್ರಾಮದಲ್ಲಿ ಜನಿಸಿದ ಅಪ್ಪಚ್ಚ ಕವಿ ವೀರಾಜಪೇಟೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ಮನೆಯಲ್ಲಿ ಬಡತನದ ಜೀವನ. ತಮ್ಮ ೧೩ನೇ ವಯಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಅವರು ತಮ್ಮ ಬಾಲ್ಯದಲ್ಲಿ ಬ್ರಾಹ್ಮಣ ಮಹಿಳೆಯೊಬ್ಬರಿಂದ ಪುರಾಣಕತೆ, ಶ್ಲೋಕಗಳು, ಭಜನೆ, ಸಂಗೀತ ಮುಂತಾದವುಗಳನ್ನು ಕಲಿತರು. ತಮ್ಮ ಉತ್ತಮ ಕಂಠಶ್ರೀಯಿAದ ಹಾಡುವಾಗ ಅದು ಜನಮನ ಸೆಳೆಯಿತು. ಅವರು ಹೆಸರಾಂತ ಹಾಡುಗಾರರಾದರು. ಸರಕಾರಿ ಗುಮಾಸ್ತನಾಗಿ ಕೆಲಸದಲ್ಲಿದ್ದು, ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿದರು. ಸಂಸ್ಕೃತವನ್ನು ಕಲಿತು ಕೊಂಡರು. ಪಂಡಿತರ ಪರಿಚಯವಾಗಿ ಕ್ರಮೇಣ ಹಾಡುಗಳ ರಚನೆ, ರಾಗ, ತಾಳಗಳ ಗತಿ, ಪ್ರಾಸ ಗಳನ್ನೆಲ್ಲಾ ಕಲಿತು ಕೊಂಡರು. ರಾತ್ರಿ ಹೆಚ್ಚು ಸಮಯ ಓದುವ - ಹಾಡುವ ಅಭ್ಯಾಸ ಮಾಡಿಕೊಂಡರು.
ಅಪ್ಪಚ್ಚ ಕವಿ ಮೊದಲು ಕನ್ನಡ ಭಾಷೆಯಲ್ಲಿ ಕವನ, ಹಾಡುಗಳನ್ನು ಬರೆಯು ತ್ತಿದ್ದರು. ಅದು ವ್ಯವಹಾರ ಭಾಷೆಯಾಗಿತ್ತು. ಒಮ್ಮೆ ಅವರ ಗುರುಗಳು, ಸಾಹಿತಿ, ಜಿಲ್ಲಾ ವಿದ್ಯಾಧಿಕಾರಿಗಳಾಗಿದ್ದ ರಘುನಾಥ ರಾಯರಿಗೆ ತಾನು ಬರೆದ ಕವನಗಳನ್ನು ತೋರಿಸಿದರು. ‘ನಿಮ್ಮ ಜನಾಂಗದಲ್ಲಿ ವಿದ್ಯಾವಂತರ ಕೊರತೆ ಇದೆ’ ಆದ್ದರಿಂದ ಕೊಡವ ಭಾಷೆಯಲ್ಲಿ ಬರೆಯುವಂತೆ ಸಲಹೆ ನೀಡಿದರು. ಅಂತೆಯೇ ಅವರು ಕನ್ನಡ ನಾಟಕಕಾರನಾಗುವ ಬದಲು ಕೊಡವ ಕವಿ, ಆದಿಕವಿ ಅಪ್ಪಚ್ಚ ಎನಿಸಿದರು.
ತಮ್ಮ ೨೪ನೇ ವಯಸ್ಸಿನಲ್ಲಿ ವಿವಾಹವಾದ ಅಪ್ಪಚ್ಚ ಕವಿ ಅವರು ತಮ್ಮ ಮಗನ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕೊಡವ ಭಾಷೆಯಲ್ಲಿ ಮುದ್ರಿಸಿ ಹಂಚಿದ್ದರು. ಕೊಡವ ಭಾಷೆಗೆ ಅವರು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು.
ಅಪ್ಪಚ್ಚ ಕವಿ ರೆವಿನ್ಯೂ, ಮುಜರಾಯಿ ಇಲಾಖೆಗಳಲ್ಲಿ ಕೆಲಸದಲ್ಲಿದ್ದು ಸಮಯ ಮಾಡಿಕೊಂಡು ಹಾಡು, ಕವನ, ಭಜನೆ, ಕೀರ್ತನೆ ಕಲಿತುಕೊಂಡು ಪುರಾಣ ಕಥನಗಳಲ್ಲಿ ಭಾಗವಹಿಸಿ ಹಾಡುಗಳ ರಚನೆ, ಬರವಣಿಗೆ, ಪ್ರಾಸಬದ್ದ ರಾಗಗಳನ್ನು ಅಳವಡಿಸಿಕೊಂಡು ಸ್ವತಃ ಹಾಡು ಕಲಿತುಕೊಂಡು ಹಾಡುಗಾರರಾದರು. ನಾಟಕ ಕಂಪೆನಿಗಳಲ್ಲಿ ಚಿಕ್ಕಪುಟ್ಟ ಪಾತ್ರವಹಿಸಿ ಸೈ ಎನಿಸಿಕೊಂಡವರು. ‘ಚಂದ್ರಹಾಸ’ ಕನ್ನಡ ನಾಟಕದಲ್ಲಿ ಪಾತ್ರವಹಿಸಿ ಶಹಬ್ಬಾಸ್ಗಿರಿ ಪಡೆದರು. ಹಗಲು - ರಾತ್ರಿ ಅಭ್ಯಾಸ ಮಾಡಿ ನಾಟಕಗಳ ತಿರುಳುಗಳನ್ನು ಅರಿತುಕೊಂಡರು.
ಕೊಡವ ಭಾಷೆಯಲ್ಲಿಯೇ ನಾಟಕಗಳನ್ನು ರಚಿಸಿ ಪ್ರದರ್ಶನ ಮಾಡಿ ತಾವು ಸ್ವತಃ ಪಾತ್ರದಾರಿಯಾಗಿ ಆದಿಕವಿ ಎನಿಸಿದರು. ೧೯೦೫ ರಲ್ಲಿ ‘ಯಯಾತಿ ನಾಟಕ’ ಮಹತ್ವ ಕೃತಿ ರಚಿಸಿದರು. ಕೊಡವ ಸಂಸ್ಕೃತಿಯ ಆದ್ಯ ಬರಹಗಾರ ಡಾ. ಕೊರವಂಡ ಅಪ್ಪಯ್ಯ ಅವರ ಮಗನ ಮದುವೆ ಸಮಾರಂಭದಲ್ಲಿ ಈ ನಾಟಕದ ಪಾತ್ರದಾರಿಯಾಗಿ ವಾಚನ ಮಾಡಿ ಬಂದವರನ್ನು ರಂಜಿಸಿದರು. ಅವರು ಬರೆದ ‘ಕಾವೇರಿ’ ನಾಟಕ ಜನಪ್ರಿಯವೆನಿಸಿತು. ಪೈಪೋಟಿಗೆ ಬಿದ್ದಂತೆ ಇಂಗ್ಲೀಷ್ ಕಲಿಯುತ್ತಿದ್ದ ಕಾಲವದು. ಕವಿಯೇ ಹೇಳುವಂತೆ ‘ನಾಟಕ, ಸಾಹಿತ್ಯ, ಕಲೆಗಳಿಗೆ ಕೊಡಗು ಹೇಳಿದ ಊರಲ್ಲ. ನಾನು ಆ ದಾರಿಯಲ್ಲಿ ನಡೆದು ಕೈ ಸುಟ್ಟುಕೊಂಡಿದ್ದೇನೆ’ ಎಂದು ಬೇಸರ ವ್ಯಕ್ತಪಟ್ಟುಕೊಂಡಿದ್ದರು. ಸ್ವತಃ ನಾಟಕ ಕಂಪೆನಿ ರಚಿಸಿಕೊಂಡು ತಾನೇ ಪಾತ್ರದಾರಿಯಾಗಿ ನಟಿಸಿ ಮನೆ ಮನೆ ಸುತ್ತಾಡಿಯೂ ತಮ್ಮ ಪ್ರಯತ್ನ ಮುಂದುವರಿಸಿದ್ದರು.
ಅಪ್ಪಚ್ಚ ಕವಿಯ ಅಂತಿಮ ದಿನಗಳು ಸಂತೋಷದಾಯಕವಾಗಿರಲಿಲ್ಲ. ಅವರ ಅನೇಕ ಲೇಖನಗಳು ಮುದ್ರಣ ಕಾಣದೆ ಮೂಲೆ ಸೇರಿದ್ದವು. ನಾಟಕಗಳಿಗೂ ಪ್ರೋತ್ಸಾಹ ಸಿಕ್ಕಿರಲಿಲ್ಲ. ಕೊನೆಗೆ ಕಾವೇರಿ ಕ್ಷೇತ್ರಕ್ಕೆ ಹೋಗಿ ಕಾವೇರಿ ಮಾತೆಗೆ ನಮಸ್ಕರಿಸಿ ಮನೆ ಸೇರಿಕೊಂಡು ಪ್ರದರ್ಶನಗಳಿಗೆ ಸ್ವಯಂ ನಿವೃತ್ತಿ ಘೋಷಿಸಿಕೊಂಡರು. ತನ್ನ ೭೬ನೇ ವಯಸ್ಸು ದಿನಾಂಕ ೨೧.೧೧.೧೯೪೪ ರಲ್ಲಿ ಶಿವಪಾದ ಸೇರಿದರು. ಶತಮಾನ ಕಳೆದ ಮೇಲೆ ಅಭಿಮಾನಿಗಳು, ಸಾಹಿತಿಗಳು ಮುಖ್ಯವಾಗಿ ಐಚೆಟ್ಟಿರ ಮುತ್ತಣ್ಣ ಅವರು, ಅಪ್ಪಚ್ಚ ಕವಿ ಅವರ ಕೆಲವು ಬರವಣಿಗೆಗಳನ್ನು ಪತ್ತೆಹಚ್ಚಿ, ಮುದ್ರಿಸಿ ಪ್ರಕಟಗೊಳಿಸುವಲ್ಲಿ ಸಫಲರಾದರು. ನಾಟಕಗಳನ್ನು ಕನ್ನಡಕ್ಕೂ ತರ್ಜುಮೆಗೊಳಿಸಿ ಬೆಳಕಿಗೆ ತಂದರು.
ಪೊನ್ನAಪೇಟೆ ಕೊಡಗು ಸೃಷ್ಟಿರಂಗದವರು ಅವರ ನಾಟಕ ಪಾತ್ರಗಳಿಗೆ ಜೀವ ತುಂಬಿದರು. ಅಭಿನವ ಅಪ್ಪಚ್ಚ ಕವಿ ‘ಅಡ್ಡಂಡ ಕಾರ್ಯಪ್ಪ’ ಅವರ ಪ್ರಯತ್ನ ಇಲ್ಲಿ ಉಲ್ಲೇಖನೀಯ. ಹಾಗೆ ಸಾಹಿತಿಗಳು, ಪತ್ರಿಕೆಗಳು, ಕೊಡವ ಸಮಾಜಗಳು, ಸಂಘ-ಸAಸ್ಥೆಗಳು ಕವಿಯ ಸಾಹಿತ್ಯಗಳ ಪುನರ್ಜೀವಗೊಳಿಸುವಲ್ಲಿ ಪಾತ್ರವಹಿಸಿ ಕವಿಯನ್ನು ಅಮರವಾಗಿಸಿದ್ದಾರೆ. ಇಂಗ್ಲೀಷರ ಆಡಳಿತದಿಂದ ಶೇಕ್ಸ್ಫಿಯರ್ ನಾಟಕಗಳು, ಕವಿತೆಗಳು, ಶಾಲಾ, ಕಾಲೇಜು ಪಠ್ಯ ಪುಸ್ತಕಗಳಲ್ಲಿ ಬೆಳಕಿಗೆ ಬಂದಿವೆ. ಆ ಭಾಗ್ಯ ಅಪ್ಪಚ್ಚ ಕವಿ ಅವರ ಸಾಹಿತ್ಯಕ್ಕೂ ಬರಲಿ ಎಂದು ಹಾರೈಸೋಣ.
- ಸಿ.ಎಂ. ಭೀಮಯ್ಯ, ನಿವೃತ್ತ ಉಪನ್ಯಾಸಕರು, ಗಾಂಧಿ ನಗರ, ವೀರಾಜಪೇಟೆ.