ಮಡಿಕೇರಿ, ನ. ೧೯: ಮದೆನಾಡಿನ ಮದೆ ಮಹದೇಶ್ವರ ವಿದ್ಯಾಲಯದಲ್ಲಿ ಡಿಸೆಂಬರ್ ೭ ರಂದು ಜಿಲ್ಲಾಮಟ್ಟದ ಜಾನಪದ ನೃತ್ಯ ಸ್ಪರ್ಧೆ ಹಾಗೂ ಶಾಲಾ ಮಟ್ಟದ ಜಾನಪದ ಕ್ರೀಡೆ ನಡೆಸುವುದಾಗಿ ಕರ್ನಾಟಕ ಜಾನಪದ ಪರಿಷತ್, ಕೊಡಗು ಘಟಕದ ಅಧ್ಯಕ್ಷ ಬಿ.ಜಿ. ಅನಂತ ಶಯನ ತಿಳಿಸಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ ರಾಮನಗರದ ಜಾನಪದ ಲೋಕದಲ್ಲಿ ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ ಏರ್ಪಡಿಸಿದೆ. ಅಲ್ಲಿ ಭಾಗವಹಿಸಲು ಜಿಲ್ಲಾಮಟ್ಟದಲ್ಲಿ ವಿಜೇತರಾದ ತಂಡಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

೨೦೨೧ ರ ಸಾಲಿಗೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿರುವ ಟಿ. ತಿಮ್ಮೇಗೌಡ ಅವರು ಕರ್ನಾಟಕದ ಯುವ ಜನರಲ್ಲಿ ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸಿ ಮುಂದಿನ ತಲೆಮಾರಿಗೆ ಜಾನಪದ ಕಲೆಗಳನ್ನು ಪರಿಚಯಿಸಿ ಮುಂದುವರೆಸುವ ಉದ್ದೇಶದಿಂದ ದತ್ತಿನಿಧಿ ನೀಡಿದ್ದು, ರಾಜ್ಯಮಟ್ಟದ ಜನಪದ ಪ್ರದರ್ಶನ ಕಲೆಗಳ ಸ್ಪರ್ಧೆಯನ್ನು ಜಾನಪದ ಲೋಕದಲ್ಲಿ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೂ. ೧೦,೦೦೦, ದ್ವಿತೀಯ ಬಹುಮಾನ ರೂ. ೫,೦೦೦, ತೃತೀಯ ಬಹುಮಾನ ರೂ. ೩,೦೦೦ ಮತ್ತು ರೂ. ೧,೦೦೦ ಗಳ ಎರಡು ಸಮಾಧಾನಕರ ಬಹುಮಾನಗಳಿದ್ದು, ಸ್ಮರಣಫಲಕದೊಂದಿಗೆ ಬಹುಮಾನ ತಂಡಗಳು ನವೆಂಬರ್ ೩೦ ರೊಳಗೆ ಹೆಸರು ನೀಡುವುದು. ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ರೂ. ೫,೦೦೦, ರೂ. ೩,೦೦೦ ಹಾಗೂ ರೂ. ೨,೦೦೦ ಬಹುಮಾನ ನೀಡಲಾಗುವುದು. ಪ್ರಯಾಣ ಭತ್ಯೆ ಇರುವುದಿಲ್ಲ.

ನಿನ್ನೆ ದಿನ ನಡೆದ ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಅಂಬೆಕಲ್ಲು ಕುಶಾಲಪ್ಪ, ರಾಣಿ ಮಾಚಯ್ಯ, ಶೋಭ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಖಜಾಂಚಿ ಸಂಪತ್ ಕುಮಾರ್, ಮೂರ್ನಾಡು ಘಟಕದ ಅಧ್ಯಕ್ಷ ಪ್ರಶಾಂತ್, ಮದೆ ಮಹದೇಶ್ವರ ಶಾಲೆಯ ಪ್ರಾಂಶುಪಾಲ ಸಿದ್ಧರಾಜು, ನಿರ್ದೇಶಕಿ ವೀಣಾಕ್ಷಿ ರವಿ ಹಾಜರಿದ್ದರು.