ಮಡಿಕೇರಿ, ನ. ೧೯: ನಗರದ ಹೊರವಲಯದ ಸಂಪಿಗೆಕಟ್ಟೆಯಿAದ ಸೋಮವಾರಪೇಟೆ ಕಡೆಗೆ ಹೋಗುವ ಜಂಕ್ಷನ್ ಬಳಿ ಅಕ್ರಮ ವಾಗಿ ಆನೆ ದಂತಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಸಿಐಡಿ ಅರಣ್ಯ ಘಟಕ ಯಶಸ್ವಿಯಾಗಿದೆ. ೨ ಆನೆ ದಂತಗಳನ್ನು ಮಾರಾಟ ಮಾಡಲು ಬೈಕ್‌ನಲ್ಲಿ ಬರುತ್ತಿರುವ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ ಸಿಬ್ಬಂದಿಗಳು ಮಂಡ್ಯ ಜಿಲ್ಲೆಯ ಅಭಿಜಿತ್ (೨೮) ಎಂಬಾತನನ್ನು ಬಂಧಿಸಿದ್ದಾರೆ.

ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕ ಕೆ.ವಿ. ಶರತ್‌ಚಂದ್ರ ನಿರ್ದೇಶನದ ಮೇರೆಗೆ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧೀಕ್ಷಕರಾದ ಎಸ್. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ.ಯು. ಸವಿ, ಹೆಡ್‌ಕಾನ್ಸ್ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಚಂಗಪ್ಪ ಹಾಗೂ ಮೋಹನ್ ಇದ್ದರು.