ಆಲೂರು ಸಿದ್ದಾಪುರ, ನ. ೧೯: ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್-ಸಂಘವು ೨೦೨೦-೨೧ನೇ ಸಾಲಿಗೆ ರೂ. ೨೧ ಲಕ್ಷದ ೮೦ ಸಾವಿರದ ೧೧೧ ನಿವ್ವಳ ಲಾಭಗಳಿಸಿರುತ್ತದೆ ಹಾಗೂ ೨೦೨೦-೨೧ನೇ ಸಾಲಿನಲ್ಲಿ ಸಂಘವು ೧ ಕೋಟಿ ೬೧ ಲಕ್ಷದ ೯೪ ಸಾವಿರದ ೭೪೦ ರೂ. ವ್ಯಾಪಾರ ವಹಿವಾಟು ನಡೆಸಿ ಈ ಮೂಲಕವು ೧೧ ಲಕ್ಷದ ೩೬ ಸಾವಿರದ ೬೭೮ ರೂ. ಲಾಭಗಳಿಸಿದೆ ಎಂದರು. ಪ್ರಸ್ತುತ ಸಾಲಿನಲ್ಲಿ ನಮ್ಮ ಸಂಘದಲ್ಲಿ ೨೯೮೫ ಮಂದಿ ಸದಸ್ಯರಿದ್ದು ೧ ಕೋಟಿ ೩೧ ಲಕ್ಷದ ೫೮ ಸಾವಿರದ ೨೯ ರೂ. ಸದಸ್ಯರ ‘ಎ’ ತರಗತಿಯ ಪಾಲು ಹಣ ಇರುತ್ತದೆ, ಮುಂದಿನ ಸಾಲಿನಲ್ಲಿ ಸಂಘವು ಮತ್ತಷ್ಟು ಲಾಭಗಳಿಸುವ ನಿರೀಕ್ಷೆ ಇದ್ದು ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಸಂಘದ ಏಳಿಗೆಗಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎಸ್. ಲೀಲಾಕುಮಾರ್ ವಾರ್ಷಿಕ ವರದಿ ಮಂಡನೆಯಲ್ಲಿ ಸಂಘದಲ್ಲಿ ಸದಸ್ಯರ ಒಟ್ಟು ಠೇವಣಿ ರೂ. ೭ ಕೋಟಿ ೩೯ ಲಕ್ಷದ ೧೮ ಸಾವಿರದ ೪೨೨ ರೂ. ಇರುತ್ತದೆ, ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೧೦ ಕೋಟಿ ೮ ಲಕ್ಷದ ೫೦ ಸಾವಿರದ ೨೯ ರೂ. ಕೆ.ಡಿ.ಸಿ.ಸಿ ಬ್ಯಾಂಕಿನಿAದ ಸಾಲ ಪಡೆದಿದ್ದು ಈ ಮೂಲಕ ಸಂಘದ ಸದ್ಯರಿಗೆ ರೂ. ೧೦ ಕೋಟಿ ೩೨ ಲಕ್ಷದ ೬೫ ಸಾವಿರದ ೩೪೯ ರೂ. ಕೆ.ಸಿ.ಸಿ. ಸಾಲ ವಿತರಣೆ ಮಾಡಿದೆ ಎಂದರು. ಸಂಘದ ವ್ಯಾಪ್ತಿಯಲ್ಲಿ ವಿವಿಧ ೯೧ ಸ್ವಸಹಾಯ ಗುಂಪುಗಳಿದ್ದು ಈ ಗುಂಪುಗಳಿಗೆ ಸಂಘವು ಸಾಲ ನೀಡಿದ್ದು, ಶೇ ನೂರರಷ್ಟು ಸಾಲ ಮರುಪಾವತಿಯಾಗಿದೆ ಎಂದರು.
ಮಹಾಸಭೆಯಲ್ಲಿ ಸಂಘವು ಮುಂದಿನ ಸಾಲಿನಲ್ಲಿ ಸದಸ್ಯರಿಗೆ ಶೇ. ೯ ರಷ್ಟು ಡಿವೆಡೆಂಡ್ ನೀಡುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಸಂಘವು ಸಾಲ ನೀಡಬೇಕೆಂದು ಸದಸ್ಯ ಚಂದ್ರಶೇಖರ್ ಒತ್ತಾಯಿಸಿದರು. ಸಂಘದ ಪ್ರಗತಿ, ಕುಂದು ಕೊರತೆಗಳ ಬಗ್ಗೆ ಸಹಕಾರಿ ಸದಸ್ಯರಾದ ಹೆಚ್.ಎಸ್. ಪ್ರೇಮ್ನಾಥ್, ದೇವಪ್ಪ, ಶಿವಪ್ಪ ಮುಂತಾದವರು ಚರ್ಚಿಸಿದರು.
ಮಹಾಸಭೆಯಲ್ಲಿ ಹತ್ತನೆ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಮಹಾಸಭೆ ಪ್ರಾರಂಭದಲ್ಲಿ ಇತ್ತೀಚೆಗೆ ಅಗಲಿದ ಕನ್ನಡ ಚಿತ್ರರಂಗದ ನಟ ಪುನಿತ್ ರಾಜ್ಕುಮಾರ್ ನಿಧನಕ್ಕೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಕೆಡಿಸಿಸಿ ಮೇಲ್ವಿಚಾರಕ ನವೀನ್ ಕುಮಾರ್, ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್, ಸಂಘದ ಲೆಕ್ಕಾಧಿಕಾರಿ ಕೆ.ಡಿ. ಚಂದ್ರಮತಿ ಹಾಜರಿದ್ದರು.